'ಆತ ತಂಡದಲ್ಲಿ ಯಾಕಿದ್ದಾನೋ ಅರ್ಥವಾಗುತ್ತಿಲ್ಲ'; ಭಾರತದ ಆಟಗಾರನ ವಿರುದ್ಧ ವ್ಯಂಗ್ಯವಾಡಿದ ಕನೇರಿಯಾ!
ಸದ್ಯ ಮಾಜಿ ಕ್ರಿಕೆಟಿಗರು, ಕ್ರೀಡಾ ಪಂಡಿತರು ಹಾಗೂ ಕ್ರೀಡಾಭಿಮಾನಿಗಳೆಲ್ಲರ ಚಿತ್ತ ಭಾರತ ಮತ್ತು ಇಂಗ್ಲೆಂಡ್ ನಡುವೆ ಲಂಡನ್ ನಗರದ ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದತ್ತ ಇದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ನೀರಸ ಆರಂಭವನ್ನು ಪಡೆದುಕೊಂಡಿತ್ತು. ನಂತರ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಗಿಸಿದ ಇಂಗ್ಲೆಂಡ್ 290 ರನ್ ಗಳಿಸುವುದರ ಮೂಲಕ 99 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಆದರೆ ಮೊದಲನೇ ಇನ್ನಿಂಗ್ಸ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 466 ಬಾರಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 368 ರನ್‌ಗಳ ಗುರಿಯನ್ನು ನೀಡಿದೆ.
ನಾಲ್ಕನೇ ದಿನದಂದು ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ ದಿನದಾಟದಂತ್ಯಕ್ಕೆ 77 ರನ್ ಗಳಿಸಿದ್ದು ಇಂಗ್ಲೆಂಡ್‌ಗೆ ಜಯಗಳಿಸಲು ಇನ್ನೂ 291 ರನ್‌ಗಳ ಅವಶ್ಯಕತೆಯಿದೆ. ಹೀಗೆ ಇಂಗ್ಲೆಂಡ್ ತಂಡ ಗೆಲುವಿನ ಗುರಿ ತಲುಪಲು ಐದನೇ ದಿನದಾಟದ ಪೂರ್ತಿ ಕಾಲಾವಕಾಶವಿದ್ದು ಸಂಪೂರ್ಣ 10 ವಿಕೆಟ್‍ಗಳು ಕೈನಲ್ಲಿವೆ, ಅಷ್ಟೇ ಅಲ್ಲದೆ ಓವಲ್ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದು ಇಂಗ್ಲೆಂಡ್ ತಂಡಕ್ಕೆ ಗೆಲ್ಲುವ ಅವಕಾಶಗಳು ಹೆಚ್ಚಿವೆ ಎಂದು ಕ್ರೀಡಾ ಪಂಡಿತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಕೂಡ ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ್ದು ಟೀಮ್ ಇಂಡಿಯಾದ ಓರ್ವ ಆಟಗಾರ ಪದೇಪದೆ ಕಳಪೆ ಪ್ರದರ್ಶನ ನೀಡುತ್ತಿದ್ದರೂ ಸಹ ತಂಡದಲ್ಲಿ ಯಾಕೆ ಉಳಿಸಿಕೊಳ್ಳುತ್ತಿದ್ದಾರೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಈ ಕೆಳಕಂಡಂತೆ ವ್ಯಂಗ್ಯವಾಡಿದ್ದಾರೆ.

ಅಜಿಂಕ್ಯ ರಹಾನೆ ಕುರಿತು ವ್ಯಂಗ್ಯವಾಡಿದ ದಾನಿಶ್ ಕನೇರಿಯಾ
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ ದಾನೀಶ್ ಕನೇರಿಯಾ ಅಜಿಂಕ್ಯ ರಹಾನೆ ವಿರುದ್ಧ ವ್ಯಂಗ್ಯವಾಡಿದ್ದಾರೆ. 'ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಪದೇ ಪದೇ ವಿಫಲರಾಗುತ್ತಿರುವ ಅಜಿಂಕ್ಯ ರಹಾನೆಗೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಯಾಕೆ ನೀಡುತ್ತಿದ್ದಾರೆ ಎಂಬುದು ನನಗೆ ನಿಜವಾಗಲೂ ಅರ್ಥವಾಗುತ್ತಿಲ್ಲ. ಆತನಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ ಆತನ ಬದಲು ಸೂರ್ಯಕುಮಾರ್ ಯಾದವ್ ಅಥವಾ ಹನುಮ ವಿಹಾರಿಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡಬೇಕು' ಎಂದು ದಾನಿಶ್ ಕನೇರಿಯಾ ಅಜಿಂಕ್ಯ ರಹಾನೆ ಆಯ್ಕೆಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಹಾನೆ ಸಾಲುಸಾಲು ಕಳಪೆ ಪ್ರದರ್ಶನ
ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 61 ರನ್ ಬಾರಿಸಿ ಉತ್ತಮ ಆಟವಾಡಿದ್ದ ರಹಾನೆ ಅದೊಂದು ಇನ್ನಿಂಗ್ಸ್ ಬಿಟ್ಟು ಬೇರೆ ಯಾವುದೇ ಪಂದ್ಯದಲ್ಲಿಯೂ ಸಹ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡುವಲ್ಲಿ ಸಫಲರಾಗಿಲ್ಲ. ಪ್ರಸ್ತುತ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 14 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 8 ಎಸೆತಗಳನ್ನು ಎದುರಿಸಿ ಯಾವುದೇ ರನ್ ಬಾರಿಸದೇ ಡಕ್ ಔಟ್ ಆಗುವುದರ ಮೂಲಕ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ಐದನೇ ಟೆಸ್ಟ್ ಪಂದ್ಯದಲ್ಲಿ ರಹಾನೆ ಹೊರಗುಳಿಯುವ ಸಾಧ್ಯತೆ
ಸರಣಿಯುದ್ದಕ್ಕೂ ಸಾಲುಸಾಲು ಕಳಪೆ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಅಜಿಂಕ್ಯಾ ರಹಾನೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಅಕ್ಷರಶಃ ನೆಲಕಚ್ಚಿದ್ದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ರಹಾನೆ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಅಜಿಂಕ್ಯ ರಹಾನೆ ಬದಲು ಹನುಮವಿಹಾರಿ ಅಥವಾ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಆಟಗಾರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications