
ಜುಲೈ ತಿಂಗಳಿನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿರುವ 1 ಟೆಸ್ಟ್ ಪಂದ್ಯ, 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟ್ವೆಂಟಿ ಸರಣಿಗಳು ನಡೆಯಲಿದ್ದು, ಟೀಮ್ ಇಂಡಿಯಾದ ಕೆಲ ಆಟಗಾರರು ಈ ಸರಣಿಗಳಲ್ಲಿ ಭಾಗವಹಿಸಲು ಈಗಾಗಲೇ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದಾರೆ.
ಹೌದು, ಪ್ರಸ್ತುತ ಭಾರತ ನೆಲದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಿದ್ದ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ಸೇರಿದಂತೆ ಇನ್ನೂ ಮುಂತಾದ ಆಟಗಾರರು ಜೂನ್ 16ರಂದು ಇಂಗ್ಲೆಂಡ್ ತಲುಪಿದ್ದಾರೆ.
ಹೀಗೆ ಇಂಗ್ಲೆಂಡ್ ತಲುಪಿರುವ ಆಟಗಾರರು ಲಂಡನ್ ಬೀದಿಗಳಲ್ಲಿ ಶಾಪಿಂಗ್ ಮಾಡಿದ್ದು, ಅಲ್ಲಿನ ಟೀಂ ಇಂಡಿಯಾ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ. ಹೀಗೆ ತಮ್ಮ ನೆಚ್ಚಿನ ಆಟಗಾರರನ್ನು ಕಂಡು ಪುಳಕಿತರಾದ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರರ ಜೊತೆ ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜತೆ ಇರುವ ಚಿತ್ರಗಳನ್ನು ಲಂಡನ್‌ನ ಟೀಮ್ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಅದರಲ್ಲಿ ಓರ್ವ ಅದೃಷ್ಟವಂತ ಅಭಿಮಾನಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರ ಜತೆಗೂ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆತನ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಜೂನ್ 24ರಿಂದ ಅಭ್ಯಾಸ ಪಂದ್ಯ ಆರಂಭವಾಗಲಿದ್ದು, ಇಂಗ್ಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪ್ರಕಟವಾಗಿರುವ ಭಾರತ ತಂಡದ ಮಾಹಿತಿ ಮುಂದೆ ಇದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪ್ರಕಟವಾಗಿರುವ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ
ವೇಳಾಪಟ್ಟಿ
• ಐದನೇ ಟೆಸ್ಟ್ ಪಂದ್ಯ ( ಮುಂದೂಡಲ್ಪಟ್ಟ ) - ಜುಲೈ 1 - 5: ಬರ್ಮಿಂಗ್ ಹ್ಯಾಮ್
• ಪ್ರಥಮ ಟಿ ಟ್ವೆಂಟಿ ಪಂದ್ಯ - ಜುಲೈ 7 - ಸೌತಾಂಪ್ಟನ್
• ದ್ವಿತೀಯ ಟಿ ಟ್ವೆಂಟಿ ಪಂದ್ಯ - ಜುಲೈ 9 - ಬರ್ಮಿಂಗ್ ಹ್ಯಾಮ್
• ತೃತೀಯ ಟಿ ಟ್ವೆಂಟಿ ಪಂದ್ಯ - ಜುಲೈ 10 - ನಾಟಿಂಗ್ ಹ್ಯಾಮ್
• ಪ್ರಥಮ ಏಕದಿನ ಪಂದ್ಯ - ಜುಲೈ 12 - ಓವಲ್
• ದ್ವಿತೀಯ ಏಕದಿನ ಪಂದ್ಯ - ಜುಲೈ 14 - ಲಾರ್ಡ್ಸ್
• ತೃತೀಯ ಏಕದಿನ ಪಂದ್ಯ - ಜುಲೈ 17 - ಮ್ಯಾಂಚೆಸ್ಟರ್