ಭಾರತ vs ಇಂಗ್ಲೆಂಡ್: 79 ರನ್‌ಗಳಿಗೆ ಆಲೌಟ್ ಆದ ವಿರಾಟ್ ಕೊಹ್ಲಿ ಬಳಗ

ಲೀಡ್ಸ್, ಆಗಸ್ಟ್ 25: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಮೊದಲ ದಿನದಾಟದಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕೇವಲ 79 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಘಾತ ಅನುಭವಿಸಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ ಉತ್ಸಾಗದಲ್ಲಿದ್ದ ಕೊಹ್ಲಿ ಬಳಗಕ್ಕೆ ಹೆಡಿಂಗ್ಲೆ ಅಂಗಳ ಭಾರೀ ಹಿನ್ನಡೆಯುಂಟು ಮಾಡಿದೆ. ಈ ಮೂಲಕ ವಿರಾಟ್ ಕೊಹ್ಲಿ ಬಳಗ 1952ರ ಬಳಿಕ ಅತ್ಯಂತ ಕನಿಷ್ಠ ಮೊತ್ತವನ್ನು ದಾಖಲಿಸಿದೆ.
ಆಘಾತಕಾರಿ ಬ್ಯಾಟಿಂಗ್ ಪ್ರದರ್ಶನ: ಟೀಮ್ ಇಂಡಿಯಾದ ಬ್ಯಾಟಿಂಗ್ ಪಡೆ ಹೆಡಿಂಗ್ಲೆ ಅಂಗಳದಲ್ಲಿ ಅಕ್ಷರಶಃ ಆಘಾತಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ತಂಡದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ 20 ರನ್ ದಾಟದಿರುವುದು ತಮಡದ ಆಘಾತಕಾರಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಮಾತ್ರವೇ ಎರಡಂಕಿ ದಾಟಿದ ಆಟಗಾರರು. ಉಳಿದ ಯಾವ ಆಟಗಾರ ಕೂಡ ಡಬಲ್ ಡಿಜಿಟ್ ಸಾಧನೆ ಮಾಡಲು ಕೂಡ ಸಾಧ್ಯವಾಗಲಿಲ್ಲ.
ಆರಂಭದಿಂದಲೇ ಆಘಾತ: ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಆರಂಭದಿಂದಲೇ ಆಘಾತಕ್ಕೆ ಒಳಗಾಯಿತು. ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಮಿಂಚಿದ್ದ ಕೆಎಲ್ ರಾಹುಲ್ ಒಂದು ರನ್ ಆಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಅನುಭವಿ ಜೇಮ್ಸ್ ಆಂಡರ್ಸನ್ ರಾಹುಲ್ ವಿಕೆಟ್ ಕೆಡವಿದ್ದರು. ಬಳಿಕ ಬಂದ ಚೇತೇಶ್ವರ್ ಪೂಜಾರ ಕೂಡ ತಮ್ಮ ಕಳಪೆ ಪ್ರದರ್ಶನ ಮುಂದಿವರಿಸಿದ್ದಾರೆ. 9 ಎಸೆತಗಳನ್ನು ಎದುರಿಸಿದ ಪೂಜಾರ 1 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.
ಮುಗ್ಗರಿಸಿದ ಕೊಹ್ಲಿ: ಇನ್ನು ಪೂಜಾರ ವಿಕೆಟ್ ಕಳೆದುಕೊಂಡ ನಂತರ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾಗೆ ಜೊತೆಯಾದರು. ಟೀಮ್ ಇಂಡಿಯಾ ಅಭಿಮಾನಿಗಳು ಈ ಜೋಡಿಯಿಂದ ಉತ್ತಮ ಜೊತೆಯಾಟದ ನಿರೀಕ್ಷೆಯಲ್ಲಿದ್ದರು. ಆದರೆ ಈ ಅನುಭವಿ ಜೋಡಿ ಮತ್ತೆ ನಿರಾಸೆ ಮೂಡಿಸಿತು. ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್‌ಗಳನ್ನು ಗಳಿಸಿ ವಿಕೆಟ್ ಕಲೆದುಕೊಂಡರು. ಈ ಮೂಲಕ ತಮ್ಮ ಕಳಪೆ ಫಾರ್ಮ್‌ಅನ್ನು ವಿರಾಟ್ ಕೊಹ್ಲಿ ಮುಂದುವರಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಜೇಮ್ಸ್ ಆಂಡರ್ಸನ್‌ಗೆ ಬಲಿಯಾದರು.
ಚೇತರಿಕೆ ನಿರೀಕ್ಷೆ ಮೂಡಿಸಿದ ರೋಹಿತ್-ರಹಾನೆ: ಇನ್ನು ಈ ಹಂತದಲ್ಲಿ ರೋಹಿತ್ ಶರ್ಮಾಗೆ ಅಜಿಂಕ್ಯಾ ರಹಾನೆ ಸಾತ್ ನೀಡಿದರು. ಈ ಜೋಡಿ ತಂಡಕ್ಕೆ ಚೇತರಿಕೆಯನ್ನು ನೀಡುವ ನಿರೀಕ್ಷೆ ಮೂಡಿಸಿತ್ತು. ಆದರೆ ಬೃಹತ್ ಜೊತೆಯಾಟವನ್ನು ನೀಡುವಲ್ಲಿ ಈ ಅನುಭವಿ ಆಟಗಾರರು ಕೂಡ ವಿಫಲವಾದರು. 18 ನ್‌ಗಳಿಸಿದ್ದ ರಹಾನೆ ರಾಬಿನ್ಸನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಪಂತ್ ಕೂಡ 2 ರನ್‌ಗಳಿಗೆ ಆಟ ಮುಗಿಸಿದರು. ರವೀಂದ್ರ ಜಡೇಜಾ ನಾಲ್ಕು ರನ್‌ಗಳ ಕೊಡುಗೆ ಸಲ್ಲಿಸಿದರು. ಲಾರ್ಡ್ಸ್ ಅಂಗಳದಲ್ಲಿ ಮಿಂಚಿದ್ದ ಶಮಿ ಹಾಗೂ ಬೂಮ್ರಾ ಇಬ್ಬರೂ ಶೂನ್ಯ ಸುತ್ತಿದರೆ ಇಶಾಂತ್ ಶರ್ಮಾ ಅಜೇಯ 8 ರನ್ ಬಾರಿಸಿ ಕ್ರೀಸ್‌ನಲ್ಲಿ ಉಳಿದರು. ಈ ಮೂಲಕ ಭಾರತ ಈ ಪಂದ್ಯದಲ್ಲಿ 78 ರನ್‌ಗಳಿಗೆ ಆಲೌಟ್ ಆಗಿದೆ.
ಮಿಂಚಿದ ಇಂಗ್ಲೆಂಡ್ ಬೌಲಿಂಗ್ ಪಡೆ: ಹೆಡಿಂಗ್ಲೆ ಅಂಗಳದಲ್ಇ ನಡೆಯುತ್ತಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಅನುಭವಿ ಆಂಡರ್ಸನ್ ಟೀಮ್ ಇಂಡಿಯಾದ ಅಗ್ರ ಬ್ಯಾಟ್ಸ್‌ಮನ್‌ಗಳನ್ನು ಫೆವಿಲಿಯನ್‌ಗೆ ಅಟ್ಟುವ ಮೂಲಕ ಆಘಾತ ನೀಡಿದರು. ಇನ್ನು ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಕ್ರೇಗ್ ಒವರ್ಟನ್ ಕೂಡ ಮಿಂಚಿದ್ದಾರೆ. ಆಂಡರ್ಸನ್ ಹಾಗೂ ಒವರ್ಟನ್ ತಲಾ ಮೂರು ವಿಕೆಟ್ ಕಬಳಿಸಿದರು. ರಾಬಿನ್ಸನ್ ಹಾಗೂ ಸ್ಯಾಮ್ ಕರನ್ ತಲಾ 2 ವಿಕೆಟ್ ಉರುಳಿಸಿದರು.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಕ್ರೇಗ್ ಓವರ್‌ಟನ್, ಜೇಮ್ಸ್ ಆಂಡರ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications