ಫೆಬ್ರವರಿ 15ರಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಲಭ್ಯವಿದ್ದಲ್ಲಿ, ಫಾರ್ಮ್‌ನಲ್ಲಿಲ್ಲದ ಬ್ಯಾಟರ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು ರಜತ್ ಪಾಟಿದಾರ್ ಅವರನ್ನು ಕೈಬಿಡಬೇಕು ಎಂದು ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಸಲಹೆ ನೀಡಿದರು.
ವಿಶಾಖಪಟ್ಟಣದಲ್ಲಿ ನಡೆದ ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆತಿಥೇಯ ಭಾರತವು ಭರ್ಜರಿ ಗೆಲುವು ಸಾಧಿಸಿತು. ಟೀಮ್ ಇಂಡಿಯಾ ರಾಜ್‌ಕೋಟ್‌ಗೆ ತೆರಳುವ ಮೊದಲು ಐದು ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ.

ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಅದ್ಭುತ ಪ್ರದರ್ಶನಗಳು, ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ಸರಣಿಯಲ್ಲಿ ತಮ್ಮ ಪುನರಾಗಮನ ಖಚಿತಪಡಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದವು.
ವಿಶಾಖಪಟ್ಟಣ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಶುಭ್ಮನ್ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕದೊಂದಿಗೆ ಇಬ್ಬರೂ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.

ಇತ್ತೀಚಿನ ಸರಣಿ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಭಾರೀ ಟೀಕೆಗಳ ಮಧ್ಯೆಯೂ 24 ವರ್ಷದ ಶುಭ್ಮನ್ ಗಿಲ್ ತಮ್ಮ 104 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಟೀಕಾಕಾರರ ಬಾಯಿ ಮುಚ್ಚಿಸಿದರು.
ಆದರೆ, ಶ್ರೇಯಸ್ ಅಯ್ಯರ್ ಇತ್ತೀಚಿನ ದಿನಗಳಲ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಅವರು ಟೆಸ್ಟ್ ಪಂದ್ಯಗಳಲ್ಲಿ 50 ಪ್ಲಸ್ ಸ್ಕೋರ್ ಇಲ್ಲದೆ 13 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಮತ್ತು ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ತಮ್ಮ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು.
ಮತ್ತೊಂದೆಡೆ, ಚೊಚ್ಚಲ ಟೆಸ್ಟ್ ಪಂದ್ಯವಾಡಿದ ರಜತ್ ಪಾಟಿದಾರ್ ಅವರು ನಿರೀಕ್ಷೆಗೆ ತಕ್ಕಂತೆ ಆಡಲು ವಿಫಲರಾದ ಕಾರಣ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಔಟಾದರು.

ಬ್ಯಾಟ್‌ನಲ್ಲಿ ಕಳಪೆ ಫಾರ್ಮ್ ಹೊಂದಿರುವ ಶ್ರೇಯಸ್ ಅಯ್ಯರ್ ಅವರನ್ನು 3ನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿದರೆ, ರಾಜ್‌ಕೋಟ್‌ನಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತೀರಾ ವಿರಳ. ಏಕೆಂದರೆ ನೇರ ಪ್ರವೇಶ ಪಡೆಯುವ ಸಾಧ್ಯತೆಯಿರುವ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಿಗೆ ದಾರಿ ಮಾಡಿಕೊಡಬೇಕಾಗುತ್ತದೆ ಎಂದು ಕಲರ್ಸ್ ಸಿನಿಪ್ಲೆಕ್ಸ್‌ನಲ್ಲಿ ನಡೆದ ಚರ್ಚಾ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಗ್ಯಾನ್ ಓಜಾ ಒತ್ತಿ ಹೇಳಿದರು.
"ಶ್ರೇಯಸ್ ಅಯ್ಯರ್ ಸ್ವಲ್ಪ ಹಿಂದೆ ಉಳಿದಿದ್ದಾರೆ. ನೀವು ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಶ್ರೇಷ್ಠ ಬ್ಯಾಟರ್‌ಗಳು ಹಿಂತಿರುಗಿದಾಗ, ಅವರು ಸ್ವಯಂಚಾಲಿತವಾಗಿ ಆಡುವ 11ರ ಬಳಗದ ಭಾಗವಾಗುತ್ತಾರೆ. ಹೀಗಾಗಿ ಬಹುಶಃ ಶ್ರೇಯಸ್ ಅಯ್ಯರ್ ಮತ್ತು ರಜತ್ ಪಾಟಿದಾರ್ ದಾರಿ ಮಾಡಿಕೊಡಬೇಕಾಗುತ್ತದೆ," ಎಂದು ಪ್ರಗ್ಯಾನ್ ಓಜಾ ತಿಳಿಸಿದರು.
ವಿರಾಟ್ ಕೊಹ್ಲಿ ಅವರು ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದರು ಮತ್ತು ಕೆಎಲ್ ರಾಹುಲ್ ಗಾಯದ ಕಾರಣ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಭಾರತ ಆಡುವ ತಂಡದ ಭಾಗವಾಗಿದ್ದರೆ, ವಿರಾಟ್ ಕೊಹ್ಲಿ ಬದಲಿಯಾಗಿ ರಜತ್ ಪಾಟಿದಾರ್ ಬಂದರು.
ಶ್ರೇಯಸ್ ಅಯ್ಯರ್ ಮತ್ತು ರಜತ್ ಪಾಟಿದಾರ್ ಇಬ್ಬರನ್ನೂ ತಂಡದ ಒಳಿತಿಗಾಗಿ ಹೊರಗಿಡುವ ನಿರ್ಧಾರವನ್ನು ತೆಗೆದುಕೊಂಡರೆ ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರಗ್ಯಾನ್ ಓಜಾ ಅಭಿಪ್ರಾಯಪಟ್ಟರು.
ದೇಶೀಯ ಕ್ರಿಕೆಟ್‌ನಲ್ಲಿ ಕೆಲವು ಪಂದ್ಯಗಳನ್ನು ಆಡುವ ಮೂಲಕ ಈ ಆಟಗಾರರು ತಮ್ಮ ಫಾರ್ಮ್ ಪಡೆದುಕೊಳ್ಳುವಂತೆ ಮಾಜಿ ಸ್ಪಿನ್ನರ್ ಸಲಹೆ ನೀಡಿದರು.
ಗಮನಾರ್ಹವೆಂದರೆ, ಭಾರತ ತಂಡ ಸೋಮವಾರ ಎರಡನೇ ಟೆಸ್ಟ್ ಪಂದ್ಯವನ್ನು ಮುಕ್ತಾಯಗೊಳಿಸಿದ ನಂತರ, ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಶ್ರೇಯಸ್ ಅಯ್ಯರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ.
ಅಲ್ಲದೆ, ಭಾರತ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ವಿಶಾಖಪಟ್ಟಣದಲ್ಲಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿರುವುದನ್ನು ಕಾಣಬಹುದು.