ಇತ್ತೀಚಿನ ವರದಿಯ ಪ್ರಕಾರ, ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳನ್ನು ಸಹ ತಪ್ಪಿಸಿಕೊಳ್ಳಲಿರುವ ಕಾರಣ, ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ತಮ್ಮ ವಿಶ್ರಾಂತಿಯನ್ನು ವಿಸ್ತರಿಸುವ ಸಾಧ್ಯತೆಯಿದೆ.
ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ಹಿಂದೆ ಸರಿದಿರುವುದು ಗಮನಾರ್ಹವಾಗಿದೆ.

ಆದಾಗ್ಯೂ ಕೆಲವು ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ರಾಜ್‌ಕೋಟ್ ಮತ್ತು ರಾಂಚಿಯಲ್ಲಿ ನಡೆಯಲಿರುವ ಮೂರನೇ ಮತ್ತು ನಾಲ್ಕನೇ ಟೆಸ್ಟ್‌ಗಳನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ ಮತ್ತು ಐದನೇ ಟೆಸ್ಟ್ ಪಂದ್ಯಕ್ಕೂ ಅವರ ಲಭ್ಯತೆ ಇನ್ನೂ ಅನಿಶ್ಚಿತತೆಯಿಂದ ಕೂಡಿದೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜನವರಿ 21ರಂದು ಭಾರತ ತಂಡವನ್ನು ಕೂಡಿಕೊಳ್ಳಲು ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ ಅದೇ ದಿನ ಮತ್ತೆ ವಾಪಸ್ಸಾದರು.

ಇತ್ತೀಚಿಗೆ, ವಿರಾಟ್ ಕೊಹ್ಲಿ ಅವರ ತಾಯಿ ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಅವರ ಅನುಪಸ್ಥಿತಿಯ ಹಿಂದಿನ ಸಂಭವನೀಯ ಕಾರಣದ ಬಗ್ಗೆ ವ್ಯಾಪಕವಾದ ಅನುಮಾನಗಳನ್ನು ಹುಟ್ಟುಹಾಕಿದ್ದವು. ಈ ವದಂತಿಗಳಿಗೆ ತೆರೆ ಎಳೆದಿರುವ ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ಅವರು ತಮ್ಮ ತಾಯಿ ಚೆನ್ನಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕಥೆಗೆ ಮತ್ತೊಂದು ಟ್ವಿಸ್ಟ್ ಎಂಬಂತೆ, ಮಾಜಿ ದಕ್ಷಿಣ ಆಫ್ರಿಕಾ ಬ್ಯಾಟರ್ ಮತ್ತು ವಿರಾಟ್ ಕೊಹ್ಲಿಯ ಆಪ್ತ ಸ್ನೇಹಿತ ಎಬಿ ಡಿವಿಲಿಯರ್ಸ್, ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ತಮ್ಮ ಯೂಟ್ಯೂಬ್ ಲೈವ್‌ನಲ್ಲಿ ಬಹಿರಂಗಪಡಿಸಿದರು.
ಇದಕ್ಕೆ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಇಬ್ಬರೂ ಈ ಬೆಳವಣಿಗೆಯ ಬಗ್ಗೆ ಮೌನವಾಗಿದ್ದಾರೆ ಮತ್ತು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಇದೇ ವೇಳೆ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ವರದಿಯ ಪ್ರಕಾರ, ಗಾಯಾಳು ಆಟಗಾರರಾದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಯಲ್ಲಿ ಪುನರ್ವಸತಿ ಸಮಯದಲ್ಲಿ ಉತ್ತಮ ಪ್ರಗತಿಯನ್ನು ತೋರಿಸಿದ್ದಾರೆ ಎಂದು ಹೇಳಿದೆ.
ಈ ಇಬ್ಬರು ಆಟಗಾರರ ಬಗ್ಗೆ ಎನ್‌ಸಿಎ ಫಿಸಿಯೊದಿಂದ ಅಂತಿಮ ವರದಿಗಾಗಿ ಇನ್ನೂ ಕಾಯಲಾಗುತ್ತಿದೆ ಮತ್ತು ಫೆಬ್ರವರಿ 15ರಿಂದ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪ್ರಾರಂಭವಾಗುವ ಮೂರನೇ ಟೆಸ್ಟ್ ಪಂದ್ಯಕ್ಕೆ ಅವರಲ್ಲಿ ಒಬ್ಬ ಆಟಗಾರನಾದರೂ ಲಭ್ಯವಿರುತ್ತಾರೆ.
ಜಸ್ಪ್ರೀತ್ ಬುಮ್ರಾಗೆ ನೋ ರೆಸ್ಟ್; ಮೊಹಮ್ಮದ್ ಸಿರಾಜ್ ಪುನರಾಗಮನ
ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಕೆಲಸದ ಹೊರೆಯನ್ನು ನಿರ್ವಹಿಸಲು ವಿಶಾಖಪಟ್ಟಣದಲ್ಲಿ ಎರಡನೇ ಪಂದ್ಯಕ್ಕೆ ತಂಡದಿಂದ ಬಿಡುಗಡೆಯಾದ ನಂತರ, ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡಕ್ಕೆ ಪುನರಾಗಮನ ಮಾಡಲಿದ್ದಾರೆ.
ಮೊಹಮ್ಮದ್ ಸಿರಾಜ್ ಅವರ ಬದಲಿ ಆಟಗಾರ ಮುಖೇಶ್ ಕುಮಾರ್ ಎರಡನೇ ಟೆಸ್ಟ್ ಪಂದ್ಯದುದ್ದಕ್ಕೂ ಕಳಪೆಯಾಗಿದ್ದರು ಮತ್ತು 12 ಓವರ್‌ಗಳಲ್ಲಿ 70 ರನ್‌ಗಳನ್ನು ನೀಡಿ ಕೇವಲ ಒಂದು ವಿಕೆಟ್ ಮಾತ್ರ ಪಡೆದರು. ಇದು ಮೊಹಮ್ಮದ್ ಸಿರಾಜ್ ಹಿಂತಿರುಗುವುದು ತಂಡಕ್ಕೆ ದೊಡ್ಡ ಉತ್ತೇಜನಕಾರಿಯಾಗಿದೆ.
ಇನ್ನು ಎರಡನೇ ಪಂದ್ಯದ ಹೀರೋ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಕಡಿಮೆ ಇದ್ದು, ನಿರ್ಣಾಯಕ ಪಂದ್ಯದಲ್ಲಿ ಅವರ ಉಪಸ್ಥಿತಿ ಪ್ರಮುಖವಾಗಿರಲಿದೆ.