ಭಾರತ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಚಂಡ ದ್ವಿಶತಕ ಬಾರಿಸಿದರು.
ಯಶಸ್ವಿ ಜೈಸ್ವಾಲ್ 277 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಸಿಡಿಸಿದರು ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 396 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಲು ನೆರವಾದರು.

ಯಶಸ್ವಿ ಜೈಸ್ವಾಲ್ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ತನ್ನ ದ್ವಿಶತಕವನ್ನು ಅದ್ಭುತ ರೀತಿಯಲ್ಲಿ ತಲುಪಿದರು ಮತ್ತು ಅವರ ಇನ್ನಿಂಗ್ಸ್‌ನುದ್ದಕ್ಕೂ ಗಮನಾರ್ಹವಾಗಿ ಆಕ್ರಮಣಕಾರಿಯಾಗಿದ್ದರು.
ಎಡಗೈ ಆರಂಭಿಕ ಬ್ಯಾಟರ್ ವಿಶೇಷವಾಗಿ ಇಂಗ್ಲೆಂಡ್‌ನ ಯುವ ಸ್ಪಿನ್ನರ್‌ಗಳನ್ನು ದಂಡಿಸಿದರು ಮತ್ತು ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಮೈದಾನದಿಂದ ಹೊರಗೆ ಕಳಿಸಲು ಹಿಂಜರಿಯಲಿಲ್ಲ.
ಯಶಸ್ವಿ ಜೈಸ್ವಾಲ್ 290 ಎಸೆತಗಳಲ್ಲಿ 19 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 209 ರನ್ ಗಳಿಸಿ ಔಟಾದರು. ಇದು ಅಭಿಮಾನಿಗಳು ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದ ಭಾರತದ ಲೆಜೆಂಡ್ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಹೋಲಿಕೆ ಮಾಡುವಂತೆ ಮಾಡಿತು.
ಆದಾಗ್ಯೂ ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರು ಅಭಿಮಾನಿಗಳಿಗೆ ತಾಳ್ಮೆಯ ಕರೆ ನೀಡಿದರು ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಭಾರತೀಯ ಲೆಜೆಂಡ್‌ನೊಂದಿಗೆ ಹೋಲಿಸುವ ಮೊದಲು ಅವರು ಸಾಕಷ್ಟು ದೂರ ಸಾಗಬೇಕಾಗಿದೆ ಎಂದು ಹೇಳಿದರು.
"ಯಶಸ್ವಿ ಜೈಸ್ವಾಲ್ ಸದ್ಯ ನಿರ್ಭೀತ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಹೇಳಬಹುದು. ಆದರೆ ನೀವು ವೀರೇಂದ್ರ ಸೆಹ್ವಾಗ್ ಬಗ್ಗೆ ಮಾತನಾಡಿದರೆ, ಅದು ಒಂದು, ಎರಡು ಅಥವಾ ಮೂರು ಪಂದ್ಯಗಳ ಬಗ್ಗೆ ಅಲ್ಲ. ಅವರ ಸಂಪೂರ್ಣ ವೃತ್ತಿಜೀವನದ ಬಗ್ಗೆ ನೀವು ಮಾತನಾಡಬೇಕಾಗುತ್ತದೆ," ಎಂದು ಪ್ರಗ್ಯಾನ್ ಓಜಾ ಸಿನಿಪ್ಲೆಕ್ಸ್‌ನಲ್ಲಿ ತಿಳಿಸಿದರು.
"ಹೀಗಾಗಿ ಇದು ಕೇವಲ ಆರಂಭ. ಯಶಸ್ವಿ ಜೈಸ್ವಾಲ್ ಮುಂದೆ ಹೇಗೆ ಆಡುತ್ತಾರೆ ಎಂಬುದನ್ನು ನಾವು ನೋಡಬೇಕಿದೆ. ಅವರು ಹೀಗೆ ಆಡಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಆದರೆ ಅವರು ನಿರೀಕ್ಷೆಗಳನ್ನು ಬದಿಗಿಟ್ಟು ಹೇಗೆ ನಿರ್ಭಯವಾಗಿ ದಾಳಿ ಮಾಡುತ್ತಾರೆ ಎಂಬುದು ಮುಖ್ಯ. ವೀರೇಂದ್ರ ಸೆಹ್ವಾಗ್ ಅದನ್ನು ಹಲವು ವರ್ಷಗಳವರೆಗೆ ನಿರಂತರವಾಗಿ ಮಾಡಿದರು," ಎಂದು ಪ್ರಗ್ಯಾನ್ ಓಜಾ ಅಭಿಪ್ರಾಯಪಟ್ಟರು.
ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ ಎರಡನೇ ದಿನ ಮೇಲುಗೈ ಸಾಧಿಸಿತು. ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದರು.
2ನೇ ದಿನದ ಅಂತ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ಬ್ಯಾಟ್ ಮಾಡಲು ಬಂದರು ಮತ್ತು ರೋಹಿತ್ ಶರ್ಮಾ ಜೊತೆಗೆ ಅಜೇಯರಾಗುಳಿದಿದ್ದರು.
ಭಾರತದ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಅವರು ಯುವ ಆರಂಭಿಕ ಬ್ಯಾಟರ್‌ನ ಬ್ಯಾಟಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದರು ಮತ್ತು ಯಶಸ್ವಿ ಜೈಸ್ವಾಲ್ ಆತ್ಮವಿಶ್ವಾಸದಿಂದ ತುಂಬಿದ್ದರು ಎಂದು ಹೇಳಿದರು.