IND vs ENG: ಜೈಸ್ವಾಲ್, ರಾಹುಲ್, ಜಡೇಜಾ ಭರ್ಜರಿ ಬ್ಯಾಟಿಂಗ್; ಆಂಗ್ಲರ ವಿರುದ್ಧ ಭಾರತೀಯರ ಮುನ್ನಡೆ
ಜನವರಿ 25ರಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ 175 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ದಿನದಾಟಕ್ಕೆ ತೆರೆ ಎಳೆದಿದೆ.
ಗುರುವಾರ ಪಂದ್ಯದ ಮೊದಲ ದಿನ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 64.3 ಓವರ್‌ಗಳಲ್ಲಿ 246 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 110 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 421 ರನ್ ಕಲೆಹಾಕಿದೆ.

ಭಾರತ ತಂಡದ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್ 80 ರನ್, ಕೆಎಲ್ ರಾಹುಲ್ 86 ರನ್ ಮತ್ತು ರವೀಂದ್ರ ಜಡೇಜಾ ಅಜೇಯ 81 ರನ್ ಗಳಿಸಿ ಭಾರತ ತಂಡದ ಮುನ್ನಡೆಗೆ ದೊಡ್ಡ ಕಾಣಿಕೆ ನೀಡಿದರು.
ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದ್ದ ಭಾರತ ತಂಡ, ಶುಕ್ರವಾರ ಎರಡನೇ ದಿನದಾಟ ಆರಂಭಿಸಿತು. ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ತಮ್ಮ ಹಿಂದಿನ ದಿನದ ಮೊತ್ತಕ್ಕೆ ಕೇವಲ 4 ರನ್ ಸೇರಿಸಿ 74 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 80 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಶುಭ್ಮನ್ ಗಿಲ್ ಉತ್ತಮ ಆರಂಭ ಕಂಡರೂ ದೊಡ್ಡ ಮೊತ್ತ ಗಳಿಸಲು ಮತ್ತೊಮ್ಮೆ ವಿಫಲರಾದರು. 66 ಎಸೆತಗಳಲ್ಲಿ 2 ಬೌಂಡರಿ ಮೂಲಕ 23 ರನ್ ಗಳಿಸಿ ಔಟಾದರು. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ಕೆಎಲ್ ರಾಹುಲ್ 123 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 86 ರನ್ ಬಾರಿಸಿ ಶತಕ ವಂಚಿತರಾದರು.
ಶ್ರೇಯಸ್ ಅಯ್ಯರ್ 63 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 35 ರನ್ ಗಳಿಸಿ ಔಟಾದರೆ, ಆಲ್‌ರೌಂಡರ್ ರವೀಂದ್ರ ಜಡೇಜಾ 155 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಜೇಯ 81 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕೆಎಸ್ ಭರತ್ ಕೂಡ ಉತ್ತಮ ರನ್ ಕೊಡುಗೆ ನೀಡಿದ್ದು, 81 ಎಸೆತಗಳಲ್ಲಿ 3 ಬೌಂಡರಿ ಮೂಲಕ 41 ರನ್ ಗಳಿಸಿದರು. ರವಿಚಂದ್ರನ್ ಅಶ್ವಿನ್ 1 ರನ್ ಗಳಿಸಿ ಔಟಾದರೆ, ಅಕ್ಷರ್ ಪಟೇಲ್ 62 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 35 ರನ್ ಗಳಿಸಿದ್ದಾರೆ.
ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಜೋ ರೂಟ್ 24 ಓವರ್‌ಗಳಲ್ಲಿ 77 ರನ್ ನೀಡಿ 2 ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲಿ 25 ಓವರ್‌ಗಳಲ್ಲಿ 131 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಜ್ಯಾಕ್ ಲೀಚ್ ಮತ್ತು ರೆಹಾನ್ ಅಹ್ಮದ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications