ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ಹೈದರಾಬಾದ್‌ನಲ್ಲಿ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ರಾಮ ಮಂದಿರ ಪ್ರತಿಷ್ಠಾ ಕರ್ಯಕ್ರಮಕ್ಕಾಗಿ ಒಂದು ದಿನದ ರಜೆ ಪಡೆದಿರುವ ವಿರಾಟ್, ಮಂಗಳವಾರ ತಂಡವನ್ನು ಸೇರಲಿದ್ದಾರೆ. ಬಳಿಕ ಜನವರಿ 25 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಕಣಕ್ಕೆ ಇಳಿಯಲ್ಲಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಇದಕ್ಕಾಗಿ ಕೊಹ್ಲಿ ಅವರು ಶತಕ ಸಿಡಿಸುವ ಅವಶ್ಯಕತೆ ಇದೆ. ಈ ಪಂದ್ಯದಲ್ಲಿ ಕೊಹ್ಲಿ 9000 ಟೆಸ್ಟ್ ರನ್ ಪೂರೈಸುವ ಹೊಸ್ತಿಲಲ್ಲಿ ನಿಂತಿದ್ದಾರೆ. ಸದ್ಯ ಭಾರತ ತಂಡದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ.

ಟೀಂ ಇಂಡಿಯಾ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 200 ಪಂದ್ಯಗಳಲ್ಲಿ 15921 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 51 ಶತಕ ಮತ್ತು 68 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಔಟಾಗದೆ 248 ರನ್ ಗಳಿಸಿದ್ದು ಸಚಿನ್ ಅವರ ಅತ್ಯುತ್ತಮ ಟೆಸ್ಟ್ ಸ್ಕೋರ್.
ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಎರಡನೇ ಸ್ಥಾನದಲ್ಲಿದ್ದಾರೆ. ದ್ರಾವಿಡ್ 163 ಪಂದ್ಯಗಳಲ್ಲಿ 13265 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 36 ಶತಕ ಮತ್ತು 63 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಸುನಿಲ್ ಗವಾಸ್ಕರ್ 10122 ರನ್ ಗಳಿಸಿದ್ದಾರೆ. ಅವರು 34 ಶತಕ ಮತ್ತು 45 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ತುಂಬಾ ಹಿಂದಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ 19ನೇ ಸ್ಥಾನ ಪಡೆದಿದ್ದಾರೆ. ಅವರು 54 ಟೆಸ್ಟ್ ಪಂದ್ಯಗಳಲ್ಲಿ 3737 ರನ್ ಗಳಿಸಿದ್ದಾರೆ. ರೋಹಿತ್ ಈ ಮಾದರಿಯಲ್ಲಿ 10 ಶತಕ ಮತ್ತು 16 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ 95 ಪಂದ್ಯಗಳಲ್ಲಿ 3193 ರನ್ ಗಳಿಸಿದ್ದಾರೆ. ಅವರು 5 ಶತಕ ಮತ್ತು 14 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಶ್ವಿನ್ ಈ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ 68 ಪಂದ್ಯಗಳಲ್ಲಿ 2804 ರನ್ ಗಳಿಸಿದ್ದಾರೆ.
ವಿರಾಟ್ ಇದುವರೆಗೆ 113 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 8848 ರನ್ ಗಳಿಸಿದ್ದಾರೆ. 9000 ರನ್ ಪೂರೈಸಲು ಅವರಿಗೆ 152 ರನ್‌ಗಳ ಅಗತ್ಯವಿದೆ. ಈ ಮಾದರಿಯಲ್ಲಿ ಕೊಹ್ಲಿ 29 ಶತಕ ಹಾಗೂ 30 ಅರ್ಧ ಶತಕ ಬಾರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಅವರ ಬೆಸ್ಟ್ ಸ್ಕೋರ್ ಅಜೇಯ 254 ರನ್ ಆಗಿದೆ. ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಪ್ರಸ್ತುತ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೈದರಾಬಾದ್ ಟೆಸ್ಟ್ ನಲ್ಲಿ ಕೊಹ್ಲಿಗೆ ಈ ವಿಶೇಷ ಸಾಧನೆ ಮಾಡುವ ಅವಕಾಶ ಸಿಗಲಿದೆ.