ಹೈದರಾಬಾದ್‌ನಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 28 ರನ್‌ಗಳ ಹೀನಾಯ ಸೋಲು ಅನುಭವಿಸಿತು. ತವರಿನಲ್ಲಿ ಮುಖಭಂಗ ಅನುಭವಿಸುವ ಮೂಲಕ ಸರಣಿಯಲ್ಲಿ 1-0 ಅಂತರದ ಹಿನ್ನಡೆ ಕಂಡಿದೆ.
ಅನುಭವಿ ಹಾಗೂ ಹಿರಿಯ ಆಟಗಾರರ ಅನುಪಸ್ಥಿತಿಯ ನಡುವೆ ಭಾರತ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರು ಮಧ್ಯಮ ಕ್ರಮಾಂಕದಲ್ಲಿ ಆಧಾರ ಸ್ತಂಭವಾಗಿದ್ದರು.

ಇದೀಗ ವಿರಾಟ್ ಕೊಹ್ಲಿ ತಂಡದ ನಾಯಕನಾಗಿದ್ದರೆ ಭಾರತ ತಂಡ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸುತ್ತಿರಲಿಲ್ಲ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
ಆತಿಥೇಯ ಭಾರತ ತಂಡ ಮೊದಲ ಇನ್ನಿಂಗ್ಸ್‌ನ ನಂತರ 190 ರನ್‌ಗಳ ಉತ್ತಮ ಮುನ್ನಡೆಯೊಂದಿಗೆ ಮುನ್ನಡೆಯಲ್ಲಿತ್ತು. ಆದರೆ ಇಂಗ್ಲೆಂಡ್ ಬ್ಯಾಟರ್‌ಗಳು ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ, ಭಾರತ ತಂಡ ಪ್ರತಿರೋಧ ಒಡ್ಡಲು ಸಾಧ್ಯವಾಗಲಿಲ್ಲ.
ಒಲ್ಲಿ ಪೋಪ್ 196 ರನ್ ಗಳಿಸಿದ್ದರಿಂದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 420 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಲು ನೆರವಾಯಿತು. ಕೊನೆಯಲ್ಲಿ ಬೆನ್ ಫೋಕ್ಸ್ ಮತ್ತು ಟಾಮ್ ಹಾರ್ಟ್ಲಿ ಉತ್ತಮ ಕೊಡುಗೆ ನೀಡಿದರು.

ಆ ಬಳಿಕ, ಚೊಚ್ಚಲ ಟೆಸ್ಟ್ ಆಟಗಾರ ಟಾಮ್ ಹಾರ್ಟ್ಲಿ ತನ್ನ 7 ವಿಕೆಟ್‌ಗಳ ಬೌಲಿಂಗ್ ಪ್ರದರ್ಶನದೊಂದಿಗೆ ಮಿಂಚಿದರು. ಪ್ರವಾಸಿ ತಂಡ ಪಂದ್ಯವನ್ನು 28 ರನ್‌ಗಳಿಂದ ಗೆದ್ದಿತು.
ಇದನ್ನು ಪ್ರತಿಬಿಂಬಿಸಿದ ಮಾಜಿ ಕ್ರಿಕೆಟಿಗ ಮೈಕಲ್ ವಾನ್, ಭಾರತ ತಂಡವು ರೆಡ್-ಬಾಲ್ ಸ್ವರೂಪದಲ್ಲಿ ವಿರಾಟ್ ಕೊಹ್ಲಿಯ ನಾಯಕತ್ವವನ್ನು ಕಳೆದುಕೊಳ್ಳುತ್ತದೆ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅವರನ್ನು ಸಂಪೂರ್ಣವಾಗಿ ಮಿಸ್ ಮಾಡಿಕೊಂಡಿದೆ ಎಂದು ಹೇಳಿದರು.
"ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ವಿರಾಟ್ ಕೊಹ್ಲಿಯ ನಾಯಕತ್ವವನ್ನು ಭಾರೀ ಪ್ರಮಾಣದಲ್ಲಿ ಕಳೆದುಕೊಳ್ಳುತ್ತದೆ. ಆ ವಾರ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಸೋಲನುಭವಿಸುತ್ತಿರಲಿಲ್ಲ. ರೋಹಿತ್ ಒಬ್ಬ ಲೆಜೆಂಡ್ ಮತ್ತು ಶ್ರೇಷ್ಠ ಆಟಗಾರ. ಆದರೆ ಅವರು ಸಂಪೂರ್ಣವಾಗಿ ಸ್ವಿಚ್ ಆಫ್ ಆಗಿದ್ದಾರೆ ಎಂದು ನಾನು ಭಾವಿಸಿದೆ," ಎಂದು ಕ್ಲಬ್ ಪ್ರೈರೀ ಫೈರ್ ಶೋನಲ್ಲಿ ಮೈಕಲ್ ವಾನ್ ತಿಳಿಸಿದರು.
ಇದೇ ವೇಳೆ, ಮೊದಲ ಇನ್ನಿಂಗ್ಸ್‌ನಲ್ಲಿ 100 ಪ್ಲಸ್ ರನ್ ಮುನ್ನಡೆ ಸಾಧಿಸಿದ ನಂತರವೂ, ಭಾರತ ತಂಡ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿರುವುದು ಇದೇ ಮೊದಲು. ಮೈಕಲ್ ವಾನ್ ಮತ್ತು ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಸೂಚಿಸಿದಂತೆ ಬೌಲರ್‌ಗಳಿಗೆ ತೀವ್ರತೆಯ ಕೊರತೆಯಿದೆ ಮತ್ತು ಅದನ್ನು ತ್ರೀ ಲಯನ್ಸ್ ಲಾಭವನ್ನು ಪಡೆದುಕೊಂಡಿದೆ.
ಮತ್ತೊಂದೆಡೆ ಫೆಬ್ರವರಿ 2ರಂದು ವಿಶಾಖಪಟ್ಟಣದಲ್ಲಿ ಪ್ರಾರಂಭವಾಗಲಿರುವ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ.
ಇವರಿಬ್ಬರ ಬದಲಿಗೆ ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಆಟಗಾರರ ಪೈಕಿ ಸರ್ಫರಾಜ್ ಖಾನ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವ ನೆಚ್ಚಿನ ಆಟಗಾರರಲ್ಲಿ ಒಬ್ಬರು.
ಸರ್ಫರಾಜ್ ಖಾನ್ ಇತ್ತೀಚಿಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದು ಯುವ ಆಟಗಾರ ಭಾರತೀಯ ತಂಡದಲ್ಲಿ ತನ್ನ ಸ್ಥಾನವನ್ನು ಗಳಿಸಲು ಸಹಾಯ ಮಾಡಿತು.
ಮೂಲಗಳ ಪ್ರಕಾರ, ಭಾರತ ತಂಡದ ಆಡುವ 11ರ ಬಳಗದಲ್ಲಿ ಕೆಎಲ್ ರಾಹುಲ್ ಬದಲಿಗೆ ರಜತ್ ಪಾಟಿದಾರ್ ಅಥವಾ ಸರ್ಫರಾಜ್ ಅವರನ್ನು ನಿರೀಕ್ಷಿಸಲಾಗಿದೆ. ಇನ್ನು ರವೀಂದ್ರ ಜಡೇಜಾ ಬದಲಿಗೆ ಕುಲದೀಪ್ ಯಾದವ್ ಆಡುವ ಸಾಧ್ಯತೆ ಇದೆ.