IND vs ENG: 5ನೇ ಟೆಸ್ಟ್: ಕಣಕ್ಕಿಳಿಯುವ ಭಾರತ ತಂಡ ಹೀಗಿರಬೇಕು ಎಂದ ಕೈಫ್; ಪ್ರಮುಖ ಆಟಗಾರನೇ ಇಲ್ಲ!

ಇತ್ತೀಚೆಗಷ್ಟೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡಿ ಸಮಬಲದೊಂದಿಗೆ ಮುಕ್ತಾಯಗೊಳಿಸಿದ ಟೀಮ್ ಇಂಡಿಯಾ ಇದೀಗ ತನ್ನ ಮುಂದಿನ ಸರಣಿಗಳಿಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಒಂದೆಡೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಯುವ ಆಟಗಾರರ ತಂಡ ಐರ್ಲೆಂಡ್ ಪ್ರವಾಸವನ್ನು ಕೈಗೊಂಡು 2 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದರೆ, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು, ಮುಂದಿನ ತಿಂಗಳು ಕಳೆದ ಬಾರಿ ಮುಂದೂಡಲ್ಪಟ್ಟಿದ್ದ ಒಂದು ಟೆಸ್ಟ್ ಪಂದ್ಯ ಸೇರಿದಂತೆ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗಳಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.
ಈಗಾಗಲೇ ಐರ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟಗೊಂಡಿದ್ದು, ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಇನ್ನುಳಿದ ಕೆಲ ಆಟಗಾರರು ಈಗಾಗಲೇ ಇಂಗ್ಲೆಂಡ್ ತಲುಪಿದ್ದಾರೆ ಹಾಗೂ ಇದೇ ತಿಂಗಳ 24ರಿಂದ ಆರಂಭಗೊಳ್ಳಲಿರುವ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಇನ್ನು ಕಳೆದ ವರ್ಷ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದಾಗ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಆತಿಥೇಯ ಆಂಗ್ಲರ ವಿರುದ್ಧ 2-1 ಅಂತರದ ಮುನ್ನಡೆಯನ್ನು ಸಾಧಿಸಿತ್ತು. ಆದರೆ ಆ ಸರಣಿಯ ಐದನೇ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರಣ ಸರಣಿ ಸಂಪೂರ್ಣವಾಗಿ ಮುಕ್ತಾಯವಾಗಿರಲಿಲ್ಲ. ಹೀಗೆ ಅಂದು ರದ್ದಾಗಿದ್ದ ಪಂದ್ಯ ಇದೇ ಜುಲೈ 1ರಿಂದ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದು ಸರಣಿಯಲ್ಲಿ ವಿಜೇತ ತಂಡವಾಗಿ ಹೊರಹೊಮ್ಮುತ್ತಾ ಅಥವಾ ಇಂಗ್ಲೆಂಡ್ ಜಯ ಸಾಧಿಸಿ ಸರಣಿ ಸಮಬಲದಲ್ಲಿ ಅಂತ್ಯಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಹೀಗೆ ಕುತೂಹಲ ಹುಟ್ಟು ಹಾಕುತ್ತಿರುವ ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾದ ಆಡುವ ಬಳಗ ಹೇಗಿರಬೇಕು ಎಂಬುದರ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸುತ್ತಿದ್ದು ಮೊಹಮ್ಮದ್ ಕೈಫ್ ಈ ಕೆಳಕಂಡ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಬೇಕು ಎಂದಿದ್ದಾರೆ.

ಮೊಹಮ್ಮದ್ ಕೈಫ್ ಹೆಸರಿಸಿರುವ ತಂಡ
ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಬಳಗ ಹೀಗಿರಬೇಕು ಎಂದಿದ್ದಾರೆ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಹನುಮ ವಿಹಾರಿ, ರವೀಂದ್ರ ಜಡೇಜಾ / ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ

ಸಿರಾಜ್ ಕೈಬಿಟ್ಟ ಕೈಫ್
ಕಳೆದ ವರ್ಷ ನಡೆದಿದ್ದ ಇದೇ ಟೆಸ್ಟ್ ಸರಣಿಯ ಮೊದಲ 4 ಪಂದ್ಯಗಳ ಪೈಕಿ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ 7 ಇನ್ನಿಂಗ್ಸ್ ಆಡಿ 14 ವಿಕೆಟ್ ಪಡೆದು ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತಿಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದರು. ಹೀಗೆ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದ ಮೊಹಮ್ಮದ್ ಸಿರಾಜ್ ಅವರನ್ನೇ ಮೊಹಮ್ಮದ್ ಕೈಫ್ ಕೈಬಿಟ್ಟಿದ್ದಾರೆ. ಸಿರಾಜ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರಬಹುದು, ಆದರೆ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ಅವರ ಪ್ರದರ್ಶನ ಉತ್ತಮ ಹಂತದಲ್ಲಿಯೇ ಇದೆ. ಹೀಗಾಗಿ ಕೈಫ್ ಮೊಹಮ್ಮದ್ ಸಿರಾಜ್ ಹೆಸರನ್ನು ಕೈಬಿಟ್ಟಿರುವುದು ಸದ್ಯ ಕೆಲ ಅಭಿಮಾನಿಗಳಿಗೆ ಹಿಡಿಸಿಲ್ಲ.

ಟೆಸ್ಟ್ ಪಂದ್ಯಕ್ಕೆ ಪ್ರಕಟವಾಗಿರುವ ಟೀಮ್ ಇಂಡಿಯಾ ಸಂಪೂರ್ಣ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications