ನಿಮ್ಮ ಸ್ಕೋರ್ ಎಷ್ಟು ಎಂದು ಕಾಲೆಳೆದ ಇಂಗ್ಲೆಂಡ್ ಪ್ರೇಕ್ಷಕರಿಗೆ ಖಡಕ್ ಉತ್ತರ ನೀಡಿದ ಮೊಹಮ್ಮದ್ ಸಿರಾಜ್

ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಮೊದಲೆರಡು ಪಂದ್ಯಗಳ ನಂತರ ಇಂಗ್ಲೆಂಡ್ ವಿರುದ್ಧ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದ್ದ ಟೀಮ್ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿಯೇ ಕಳಪೆ ಪ್ರದರ್ಶನ ನೀಡುವುದರ ಮೂಲಕ ಮಂಕಾಗಿದೆ. ಲೀಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಕೇವಲ 40.4 ಓವರ್‌ಗಳ ಬ್ಯಾಟಿಂಗ್ ಮಾಡಿದ ಭಾರತ ತಂಡ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಕೇವಲ 78 ರನ್‌ಗೆ ಆಲ್ ಔಟ್ ಆಯಿತು.
ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಬೌಲಿಂಗ್ ಮಾಡಲು ಬಂದ ಭಾರತೀಯ ಆಟಗಾರರ ವಿರುದ್ಧ ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಇಂಗ್ಲೆಂಡ್ ಪ್ರೇಕ್ಷಕರು ಎಂದಿನಂತೆ ತಮ್ಮ ಅಸಭ್ಯ ವರ್ತನೆಯನ್ನು ಮುಂದುವರೆಸಿದ್ದಾರೆ. ಭಾರತದ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪಂದ್ಯ ವೀಕ್ಷಿಸಲು ಮೈದಾನದಲ್ಲಿ ನೆರದಿದ್ದ ಇಂಗ್ಲೆಂಡ್ ಪ್ರೇಕ್ಷಕರು ನಿಮ್ಮ ಸ್ಕೋರ್ ಎಷ್ಟು ಎಂದು ಮೊಹಮ್ಮದ್ ಸಿರಾಜ್ ಅವರಿಗೆ ಪ್ರಶ್ನೆಯನ್ನು ಹಾಕಿದ್ದಾರೆ. ಟೀಮ್ ಇಂಡಿಯಾ ಕೇವಲ 78 ರನ್ ಗಳಿಸಿ ಆಲ್ ಔಟ್ ಆದ ಕಾರಣ ಇಂಗ್ಲೆಂಡ್ ಪ್ರೇಕ್ಷಕರು ಮೊಹಮ್ಮದ್ ಸಿರಾಜ್ ಅವರಿಗೆ ಈ ರೀತಿಯ ಪ್ರಶ್ನೆಗಳನ್ನು ಕೇಳುವುದರ ಮೂಲಕ ಕಾಲೆಳೆಯಲು ಯತ್ನಿಸಿದ್ದಾರೆ. ಇಂಗ್ಲೆಂಡ್ ಪ್ರೇಕ್ಷಕರು ಕೇಳಿದ ಈ ಪ್ರಶ್ನೆಗೆ ಮೊಹಮ್ಮದ್ ಸಿರಾಜ್ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದರ ಮಾಹಿತಿ ಮುಂದೆ ಇದೆ ಓದಿ..

ಸ್ಕೋರ್ ಕೇಳಿದವರಿಗೆ ಸನ್ನೆಯ ಮೂಲಕ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ಸಿರಾಜ್
ತನ್ನ ಪಾಡಿಗೆ ತಾನು ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಕರೆದು ನಿಮ್ಮ ಸ್ಕೋರ್ ಎಷ್ಟು ಎಂದು ಕೇಳಿ ಕಾಲೆಳೆಯಲು ಯತ್ನಿಸಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಕೈ ಸನ್ನೆಯಲ್ಲಿಯೇ 1-0 ಎಂದು ಉತ್ತರ ನೀಡುವ ಮೂಲಕ ಮೊಹಮ್ಮದ್ ಸಿರಾಜ್ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ನೀಡಿದ್ದಾರೆ. ಅಲ್ಪ ಮೊತ್ತಕ್ಕೆ ಆಲ್ ಔಟ್ ಆದ ಕಾರಣಕ್ಕೆ ಟೀಮ್ ಇಂಡಿಯಾವನ್ನು ಕಾಲೆಳೆಯಲು ಯತ್ನಿಸಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಸರಣಿಯಲ್ಲಿ ನಾವು ಈಗಾಗಲೇ ಮುನ್ನಡೆ ಸಾಧಿಸಿದ್ದೇವೆ ಎಂಬುದನ್ನು ಕೈಸನ್ನೆಯ ಮೂಲಕ ಹೇಳಿ ಮೊಹಮ್ಮದ್ ಸಿರಾಜ್ ತಿರುಗೇಟು ನೀಡಿದರು.

ಮೊದಲನೇ ದಿನದಾಟದಲ್ಲಿ ಇಂಗ್ಲೆಂಡ್ ಮೇಲುಗೈ
ಭಾರತ ಮತ್ತು ಇಂಗ್ಲೆಂಡ್ ನಡುವೆ ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಅಕ್ಷರಶಃ ಮೇಲುಗೈ ಸಾಧಿಸಿದೆ. ಟಾಸ್ ಸೋತು ಫೀಲ್ಡಿಂಗ್ ಆರಂಭಿಸಿದ ಇಂಗ್ಲೆಂಡ್ ಭಾರತ ತಂಡವನ್ನು 78 ರನ್‌ಗಳಿಗೆ ಆಲ್ ಔಟ್ ಮಾಡುವ ಮೂಲಕ ಶುಭಾರಂಭ ಮಾಡಿತು. ಹಾಗೂ ಮೊದಲನೇ ದಿನ ತನ್ನ ಪಾಲಿನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 120 ರನ್ ಗಳಿಸಿದ್ದು ಯಾವುದೇ ವಿಕೆಟ್ ಕಳೆದುಕೊಳ್ಳದೇ ಮೊದಲ ದಿನದಾಟವನ್ನು 42 ರನ್‌ಗಳ ಮುನ್ನಡೆಯೊಂದಿಗೆ ಅಂತ್ಯಗೊಳಿಸಿದೆ.

ಮೊಹಮ್ಮದ್ ಸಿರಾಜ್ ಮೇಲೆ ಬಾಟಲ್ ಎಸೆದ ಇಂಗ್ಲೆಂಡ್ ಪ್ರೇಕ್ಷಕರು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಮೊಹಮ್ಮದ್ ಸಿರಾಜ್ ಮೇಲೆ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬಂದಿದ್ದ ಇಂಗ್ಲೆಂಡ್ ಪ್ರೇಕ್ಷಕರು ಬಾಟಲ್ ಎಸೆಯುವುದರ ಮೂಲಕ ವಿಕೃತಿ ಮೆರೆದಿದ್ದಾರೆ. ಮೊಹಮ್ಮದ್ ಸಿರಾಜ್ ಮೇಲೆ ಇಂಗ್ಲೆಂಡ್ ಪ್ರೇಕ್ಷಕರು ಬಾಟಲ್ ಎಸೆದಿರುವುದರ ವಿರುದ್ಧ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಕಿಡಿಕಾರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications