
ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಚರ್ಚಿಸಲ್ಪಡುತ್ತಿರುವ ಸರಣಿ ಎಂದರೆ ಅದು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿ. ಹೌದು, ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಮುಗಿದಿದ್ದು ಎರಡೂ ತಂಡಗಳು ಸಹ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿವೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 2 ರ ಗುರುವಾರದಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಕುರಿತು ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಿವೆ.
ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡುವುದರ ಮೂಲಕ 151 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದ್ದ ಟೀಮ್ ಇಂಡಿಯಾ ನಂತರ ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿತು. ಹೌದು, ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸಹಿತ 76 ರನ್‌ಗಳ ಸೋಲನ್ನು ಅನುಭವಿಸಿದ ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ವಿರುದ್ಧ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಯ ಗಳಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ.
ಅತ್ತ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಲಾಗದೇ ಹಿನ್ನಡೆಯನ್ನು ಅನುಭವಿಸಿದ್ದ ಇಂಗ್ಲೆಂಡ್ ತಂಡ ಭಾರತ ಮತ್ತು ಇಂಗ್ಲೆಂಡ್ ನಡುವೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆದು ಸರಣಿಯಲ್ಲಿ ಸಮಬಲವನ್ನು ಸಾಧಿಸಿದ್ದು ಭಾರತ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವನ್ನು ಸಾಧಿಸುವ ಯೋಜನೆಯಲ್ಲಿದೆ.
ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳೂ ಸಹ ಸಮಬಲವನ್ನು ಸಾಧಿಸಿರುವ ಕಾರಣದಿಂದ ನಾಲ್ಕನೇ ಟೆಸ್ಟ್ ಪಂದ್ಯದ ಮೇಲಿನ ನಿರೀಕ್ಷೆ ಮತ್ತು ಕುತೂಹಲ ದುಪ್ಪಟ್ಟಾಗಿದ್ದು, ಪಂದ್ಯದ ಕುರಿತ ಹವಾಮಾನ ವರದಿ ನೇರಪ್ರಸಾರದ ಮಾಹಿತಿ ಮತ್ತು ಸಂಭಾವ್ಯ ಆಡುವ ಬಳಗದ ವಿವರಗಳು ಮುಂದೆ ಇದೆ ಓದಿ ..
ಪಂದ್ಯ ಆರಂಭದ ಸಮಯ ಮತ್ತು ಸ್ಥಳ:
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಓವಲ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 2 ರಂದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.
ಹವಾಮಾನ ವರದಿ:
ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 6 ರವರೆಗೆ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ 3 ದಿನಗಳ ಕಾಲ ಮಳೆಯಾಗುವ ಸಂಭವ ತೀರಾ ಕಡಿಮೆ ಇದೆ. ಆದರೆ, ಪಂದ್ಯದ ನಾಲ್ಕನೇ ಮತ್ತು ಐದನೇ ದಿನ ಆಗಾಗ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿ ಹೇಳುತ್ತಿದೆ.
ಪಿಚ್ ವರದಿ:
ಓವಲ್ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಸಹಕಾರಿಯಾಗಿದ್ದು ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ರನ್ ಕಲೆ ಹಾಕುವುದು ಒಳ್ಳೆಯ ನಿರ್ಧಾರವಾಗಿರಲಿದೆ. ಆರಂಭದ ಸಮಯದಲ್ಲಿ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿರಲಿರುವ ಪಿಚ್ ಸಮಯ ಕಳೆದಂತೆ ಸ್ಪಿನ್ ಬೌಲರ್‌ಗಳಿಗೂ ಒಗ್ಗಿಕೊಳ್ಳಲಿದೆ. ಈ ಮೂಲಕ ಮತ್ತೊಂದು ಸಮತೋಲನವಾದ ಟೆಸ್ಟ್ ಪಂದ್ಯಕ್ಕೆ ಓವಲ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ಸಂಭಾವ್ಯ ಆಡುವ ಬಳಗ
ಭಾರತದ ಸಂಭಾವ್ಯ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ / ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ / ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡಾವಿಡ್ ಮಲನ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊ (ವಿಕೆಟ್ ಕೀಪರ್), ಒಲ್ಲಿ ಪೋಪ್ / ಡೇನಿಯಲ್ ಲಾರೆನ್ಸ್, ಮೊಯೀನ್ ಅಲಿ, ಒಲ್ಲಿ ರಾಬಿನ್ಸನ್, ಕ್ರಿಸ್ ವೋಕ್ಸ್ / ಸ್ಯಾಮ್ ಕರನ್, ಕ್ರೇಗ್ ಓವರ್‌ಟನ್ / ಮಾರ್ಕ್ ವುಡ್, ಮತ್ತು ಜೇಮ್ಸ್ ಆಂಡರ್ಸನ್
ನೇರ ಪ್ರಸಾರ:
ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಸೋನಿ ಸಿಕ್ಸ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ ಮತ್ತು ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿಯೂ ಸಹ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.