ಶುಕ್ರವಾರ, ಫೆಬ್ರವರಿ 16ರಂದು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತ ತಂಡದ ಅಗ್ರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 500 ಟೆಸ್ಟ್ ವಿಕೆಟ್‌ಗಳ ಹೆಗ್ಗುರುತನ್ನು ತಲುಪಿದ ಎರಡನೇ ಭಾರತೀಯ ಆಟಗಾರನಾದರು.
ಮಾಜಿ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ನಂತರ 500 ಟೆಸ್ಟ್ ವಿಕೆಟ್‌ಗಳ ಸಾಧನೆ ಮಾಡಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಅಶ್ವಿನ್ ಅವರ ಪ್ರಯಾಣ ಮತ್ತು ಸಾಧನೆಗಳು ಅವರ ಕೌಶಲ್ಯ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
"500 ಟೆಸ್ಟ್ ವಿಕೆಟ್‌ಗಳನ್ನು ಪಡೆದು ಅಸಾಧಾರಣ ಮೈಲಿಗಲ್ಲು ಸ್ಥಾಪಿಸಿದ ರವಿಚಂದ್ರನ್ ಅಶ್ವಿನ್ ಅವರಿಗೆ ಅಭಿನಂದನೆಗಳು! ಅವರ ಪ್ರಯಾಣ ಮತ್ತು ಸಾಧನೆಗಳು ಅವರ ಕೌಶಲ್ಯ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಅಶ್ವಿನ್ ಮತ್ತಷ್ಟು ಶಿಖರಗಳನ್ನು ಏರಲಿ ಎಂದು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ," ಎಂದು ಪ್ರಧಾನಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ.
ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ರವಿಚಂದ್ರನ್ ಅಶ್ವಿನ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ದಿನವನ್ನು ಹೊಂದಿದ್ದರು.

ಭಾರತ ತಂಡ ದಿನದ ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಬಳಿಕ ಬ್ಯಾಟಿಂಗ್‌ಗೆ ಬಂದ ಅಶ್ವಿನ್ ಅವರು ಚೊಚ್ಚಲ ಪಂದ್ಯವಾಡಿದ ಧ್ರುವ್ ಜುರೆಲ್ ಅವರೊಂದಿಗೆ 77 ರನ್‌ಗಳ ಜೊತೆಯಾಟವನ್ನು ನಿರ್ಮಿಸಿ ಭಾರತ ತಂಡವನ್ನು 400 ರನ್‌ಗಳ ಗಡಿ ದಾಟುವಂತೆ ಮಾಡಿದರು. ರವಿಚಂದ್ರನ್ ಅಶ್ವಿನ್ 37 ರನ್ ಗಳಿಸಿದ್ದು, ಭಾರತ ತನ್ನ ಇನ್ನಿಂಗ್ಸ್ ಅನ್ನು 445 ರನ್‌ಗಳಿಗೆ ಅಂತ್ಯಗೊಳಿಸಿತು.
ನಂತರ, ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ನ ಬೆನ್ ಡಕೆಟ್ ಮತ್ತು ಝಾಕ್ ಕ್ರಾಲಿ ನಡುವಿನ ಆರಂಭಿಕ ಜೊತೆಯಾಟವನ್ನು ಮುರಿಯಲು ಅಗತ್ಯವಿದ್ದರಿಂದ ಭಾರತ ತಂಡ ಮತ್ತೊಮ್ಮೆ ಬ್ರೇಕ್-ಥ್ರೋಗಾಗಿ ಆಫ್-ಸ್ಪಿನ್ನರ್ ಕಡೆಗೆ ತಿರುಗಿತು.
ಆರ್ ಅಶ್ವಿನ್ ಬೌಲಿಂಗ್‌ನಲ್ಲಿ ಝಾಕ್ ಕ್ರಾಲಿ ಸ್ವೀಪ್ ಶಾಟ್ ಬಾರಿಸಲು ನಿರ್ಧರಿಸಿದಾಗ ಅವರ ಪ್ರಯತ್ನವು ತಪ್ಪಾಗಿ ಫೀಲ್ಡರ್‌ಗೆ ಹೋಯಿತು. ಈ ಮೂಲಕ ರವಿಚಂದ್ರನ್ ಅಶ್ವಿನ್ 500 ವಿಕೆಟ್‌ಗಳ ಹೆಗ್ಗುರುತನ್ನು ಪಡೆದ ಎರಡನೇ ಭಾರತೀಯ ಹಾಗೂ ವಿಶ್ವದ ಒಂಬತ್ತನೇ ಬೌಲರ್ ಎನಿಸಿದರು.
ಭಾರತೀಯ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತನ್ನ ಸಾಧನೆಯನ್ನು ತನ್ನ ತಂದೆಗೆ ಅರ್ಪಿಸಿದರು. ಅವರು ಹಲವು ವರ್ಷಗಳಿಂದ ತನಗೆ ನಿರಂತರ ಬೆಂಬಲವಾಗಿದ್ದಾರೆ ಎಂದು ಭಾವುಕರಾದರು.
"ಇದು ಸಾಕಷ್ಟು ದೀರ್ಘ ಪ್ರಯಾಣವಾಗಿದೆ. ನಾನು 500ನೇ ವಿಕೆಟ್ ಅನ್ನು ನನ್ನ ತಂದೆಗೆ ಅರ್ಪಿಸಲು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಅನುಭವಿಸಿದ ಎಲ್ಲದರ ಏರಿಳಿತಗಳನ್ನು ಅವರು ಅನುಭವಿಸಿದ್ದಾರೆ. ಅವರು ನನಗೆ ನಿರಂತರ ಬೆಂಬಲವಾಗಿದ್ದಾರೆ. 500 ವಿಕೆಟ್‌ಗಳ ಗಡಿ ಇದೀಗ ತಲುಪಲಾಗಿದೆ. ನಾವು ಸಮತೋಲನದಲ್ಲಿ ತೂಗಾಡುವ ಪಂದ್ಯವನ್ನು ಪಡೆದುಕೊಂಡಿದ್ದೇವೆ," ಎಂದು ರವಿಚಂದ್ರನ್ ಅಶ್ವಿನ್ ಹೇಳಿದರು.
ಇನ್ನು ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರ ಆಕರ್ಷಕ ಶತಕಗಳ ನೆರವಿನಿಂದ 130.5 ಓವರ್‌ಗಳಲ್ಲಿ 445 ರನ್‌ಗಳಿಗೆ ಸರ್ವಪತನ ಕಂಡಿತು.
ಅನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ ಬೆನ್ ಡಕೆಟ್ ಅವರ ಅಮೋಘ ಶತಕದ ಸಹಾಯದಿಂದ ಎರಡನೇ ದಿನದಾಟದ ಅಂತ್ಯದ ವೇಳೆಗೆ 35 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿದ್ದು, ಇನ್ನೂ 238 ರನ್‌ಗಳಿಂದ ಹಿಂದೆ ಬಿದ್ದಿದೆ.