ಬ್ಯಾಟ್ ಹಿಡಿದು ಹಾಜರಾಗಿ ಕ್ರಿಕೆಟ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರವಿಚಂದ್ರನ್ ಅಶ್ವಿನ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು. ನಂತರ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಗೆಲುವನ್ನು ಸಾಧಿಸಿದೆ.
ಹೀಗೆ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದರ ಮೂಲಕ ಸರಣಿ ಮೇಲೆ ಹಿಡಿತವನ್ನು ಸಾಧಿಸಿದ್ದ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ವಿರುದ್ಧ ಲೀಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲೆರಡು ದಿನಗಳಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಇಂಗ್ಲೆಂಡ್ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 78 ರನ್‌ಗಳಿಗೆ ಆಲ್ ಔಟ್ ಆದ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿಯೂ ಮುಗ್ಗರಿಸಿದೆ. ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿರುವ ಇಂಗ್ಲೆಂಡ್ ಎರಡನೆ ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 423 ರನ್ ಗಳಿಸಿ ಕೊಹ್ಲಿ ಪಡೆ ವಿರುದ್ಧ 345 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ.
ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ 3 ಪಂದ್ಯಗಳಲ್ಲಿಯೂ ವಿಶ್ವದ ಅತ್ಯುತ್ತಮ ಟೆಸ್ಟ್ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಆಡುವ ಅವಕಾಶವನ್ನೇ ನೀಡಿಲ್ಲ. ಪ್ರತಿ ಪಂದ್ಯದಲ್ಲಿಯೂ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ಸಿಗದೇ ಇದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಹೊರಗಿಡುತ್ತಿರುವ ಕುರಿತು ಸಾಕಷ್ಟು ಟೀಕೆ ಮತ್ತು ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತವೆ.
ಈ ನಡುವೆ ಇದೀಗ ರವಿಚಂದ್ರನ್ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಈ ಕೆಳಕಂಡ ವಿಭಿನ್ನವಾದ ಫೋಟೋಗಳನ್ನು ಹಂಚಿಕೊಂಡಿದ್ದು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದಾರೆ.

ಎಡಗೈ ಬ್ಯಾಟಿಂಗ್ ಮಾಡುತ್ತಿರುವ ರವಿಚಂದ್ರನ್ ಅಶ್ವಿನ್
ಹೀಗೆ ಇಂಗ್ಲೆಂಡ್ ವಿರುದ್ಧದ ಮೊದಲ 3 ಪಂದ್ಯಗಳಲ್ಲಿಯೂ ಅವಕಾಶ ಸಿಗದ ರವಿಚಂದ್ರನ್ ಅಶ್ವಿನ್ ಇದೀಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಾವು ಎಡಗೈ ಬ್ಯಾಟಿಂಗ್ ಮಾಡುತ್ತಿರುವ 2 ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಅರೇ ಇದೇನಪ್ಪಾ ಇದು ರವಿಚಂದ್ರನ್ ಅಶ್ವಿನ್ ಎಡಗೈ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯಿಸಲು ಆರಂಭಿಸಿದ್ದು ರವಿಚಂದ್ರನ್ ಅಶ್ವಿನ್ ಅವರ ಫೋಟೋಗಳು ವೈರಲ್ ಆಗಿವೆ.

ಏನಾದರೂ ವಿಭಿನ್ನವಾದ ಪ್ರಯತ್ನ ಮಾಡಬೇಕು ಎಂದ ಅಶ್ವಿನ್
ಹೀಗೆ ವಿಭಿನ್ನವಾಗಿ ಎಡಗೈ ಬ್ಯಾಟಿಂಗ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ರವಿಚಂದ್ರನ್ ಅಶ್ವಿನ್ ವಿಭಿನ್ನವಾಗಿ ಏನಾದರೂ ಹೊಸದನ್ನು ಪ್ರಯತ್ನಿಸುವ ಆಸೆಯಿದೆ ಆದರೆ ಯಾವತ್ತೂ ಸೋಲುವುದಿಲ್ಲ ಎಂಬರ್ಥದಲ್ಲಿ ಬರಹವೊಂದನ್ನು ಬರೆದುಕೊಂಡಿದ್ದಾರೆ. ಹೀಗೆ ಬರಹವನ್ನು ಬರೆದುಕೊಳ್ಳುವುದರ ಮೂಲಕ ಹೊಸತನ್ನೇನಾದರೂ ಪ್ರಯತ್ನಿಸಬೇಕು ಎಂಬ ಹಂಬಲವನ್ನು ರವಿಚಂದ್ರನ್ ಅಶ್ವಿನ್ ವ್ಯಕ್ತಪಡಿಸಿದ್ದಾರೆ.

ರವೀಂದ್ರ ಜಡೇಜಾಗೆ ರವಿಚಂದ್ರನ್ ಅಶ್ವಿನ್ ಪೈಪೋಟಿ ಎಂದ ನೆಟ್ಟಿಗರು
ಇನ್ನು ರವಿಚಂದ್ರನ್ ಅಶ್ವಿನ್ ಎಡಗೈ ಬ್ಯಾಟಿಂಗ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡ ನಂತರ ನೆಟ್ಟಿಗರು ಭಿನ್ನವಿಭಿನ್ನವಾದ ಪ್ರತ್ಯುತ್ತರಗಳನ್ನು ನೀಡುತ್ತಿದ್ದಾರೆ. ಅಶ್ವಿನ್ ಎಡಗೈ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಿದ ನೆಟ್ಟಿಗರು ಮುಂದಿನ ಪಂದ್ಯಗಳಲ್ಲಿ ರವೀಂದ್ರ ಜಡೇಜಾಗೆ ಪೈಪೋಟಿಯನ್ನು ನೀಡಲು ರವಿಚಂದ್ರನ್ ಅಶ್ವಿನ್ ಸಜ್ಜಾಗುತ್ತಿದ್ದಾರೆ ಎಂದು ತಮಾಷೆಯ ಪ್ರತ್ಯುತ್ತರವನ್ನು ನೀಡುತ್ತಿದ್ದಾರೆ.
ಹೀಗೆ ಭಿನ್ನವಿಭಿನ್ನವಾದ ಪ್ರತ್ಯುತ್ತರಗಳನ್ನು ನೀಡಿರುವ ಅಭಿಮಾನಿಗಳು ರವಿಚಂದ್ರನ್ ಅಶ್ವಿನ್ ಅವರಿಗೆ ಮುಂದಿನ ಟೆಸ್ಟ್ ಪಂದ್ಯಗಳಲ್ಲಾದರೂ ಅವಕಾಶ ಸಿಗಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications