4ನೇ ಟೆಸ್ಟ್ ಕೊನೆಯ ದಿನದಾಟದಿಂದ ಭಾರತದ ಇಬ್ಬರು ಆಟಗಾರರು ಔಟ್; 5ನೇ ಟೆಸ್ಟ್‌ಗೂ ಅನುಮಾನ?

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಲಂಡನ್ ನಗರದ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಅಂತಿಮ ಘಟ್ಟಕ್ಕೆ ಬಂದು ತಲುಪಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಗಳಿಸುವುದರ ಮೂಲಕ ಸರಣಿಯಲ್ಲಿ ಸಮಬಲವನ್ನು ಸಾಧಿಸಿವೆ. ಹೀಗಾಗಿ ಎರಡೂ ತಂಡಗಳಿಗೂ ಸಹ ಪ್ರಸ್ತುತ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯ ಪ್ರಮುಖವಾಗಿದ್ದು, ಕೊನೆಯ ದಿನದಾಟದಂದು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಲಿವೆ..
ಈ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 191 ರನ್ ಗಳಿಸಿ ಟೀಮ್ ಇಂಡಿಯಾ ನೀರಸ ಪ್ರದರ್ಶನವನ್ನು ನೀಡಿತ್ತು. ನಂತರ ಇಂಗ್ಲೆಂಡ್ ತನ್ನ ಮೊದಲನೇ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಸಿ 99 ರನ್‌ಗಳ ಮುನ್ನಡೆಯನ್ನು ಸಾಧಿಸಿತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ 466 ರನ್ ಗಳಿಸುವುದರ ಮೂಲಕ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 368 ರನ್‌ಗಳ ಗುರಿಯನ್ನು ನೀಡಿದೆ. ಟೀಮ್ ಇಂಡಿಯಾ ನೀಡಿರುವ 368 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ನಾಲ್ಕನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 77 ರನ್ ಗಳಿಸಿದ್ದು ಗೆಲ್ಲಲು ಇನ್ನೂ 291 ರನ್‌ಗಳ ಅಗತ್ಯತೆಯಿದೆ. ಇನ್ನು ಇಂಗ್ಲೆಂಡ್ ತಂಡಕ್ಕೆ ಐದನೇ ದಿನದಾಟದ ಪೂರ್ತಿ ಆಡುವ ಸಮಯಾವಕಾಶವಿದ್ದು ಕೈನಲ್ಲಿ ಸಂಪೂರ್ಣ ಹತ್ತು ವಿಕೆಟ್‍ಗಳಿವೆ.
ಇತ್ತ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನವನ್ನು ನೀಡಿದ್ದು ಇದೀಗ ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನವನ್ನು ನೀಡಿ ಐದನೇ ದಿನದಾಟದಂದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಐದನೇ ದಿನದಾಟ ಆರಂಭವಾಗುವ ಮುನ್ನವೇ ಟೀಮ್ ಇಂಡಿಯಾಗೆ ಕಹಿ ಸುದ್ದಿಯೊಂದು ಬಂದಿದ್ದು ತಂಡದ ಇಬ್ಬರು ಪ್ರಮುಖ ಆಟಗಾರರು ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಿಂದ ಹೊರಗುಳಿದಿದ್ದಾರೆ.

ಓವಲ್ ಟೆಸ್ಟ್ ಪಂದ್ಯದ ಕೊನೆಯ ದಿನದಾಟಕ್ಕೆ ರೋಹಿತ್ ಮತ್ತು ಪೂಜಾರ ಅಲಭ್ಯ
ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಇದೇ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶರ್ಮಾ ಎಡಗಾಲಿನ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು ಕೊನೆಯ ದಿನದಾಟವನ್ನು ಆಡಲು ಅಲಭ್ಯರಾಗಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಶತಕ ಸಿಡಿಸಿ ಉತ್ತಮ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಕೊನೆಯ ದಿನದಾಟದಿಂದ ಹೊರಗುಳಿಯಲಿದ್ದಾರೆ. ಇನ್ನು ಚೇತೇಶ್ವರ್ ಪೂಜಾರ ಕೂಡ ಎಡ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟವನ್ನು ಆಡಲು ಅಸಮರ್ಥರಾಗಿದ್ದಾರೆ. ಹೀಗಾಗಿ ಈ ಇಬ್ಬರೂ ಆಟಗಾರರು ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಂದು ಕಣಕ್ಕಿಳಿಯುವುದಿಲ್ಲ, ಬದಲಾಗಿ ಪರ್ಯಾಯ ಆಟಗಾರರು ಈ ಇಬ್ಬರ ಬದಲಾಗಿ ಫೀಲ್ಡಿಂಗ್ ಮಾಡಲಿದ್ದಾರೆ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಮತ್ತು ಚೇತೇಶ್ವರ್ ಪೂಜಾರ ಮಿಂಚು
ಸದ್ಯ ಇಂಗ್ಲೆಂಡ್ ವಿರುದ್ಧ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನು ನೀಡಿರಲಿಲ್ಲ. ಮೊದಲನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 11 ರನ್ ಬಾರಿಸಿದ್ದರೆ, ಇತ್ತ ಚೇತೇಶ್ವರ್ ಪೂಜಾರ ಕೇವಲ 4 ರನ್ ಬಾರಿಸಿದ್ದರು. ಹೀಗೆ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಮಂಕಾಗಿದ್ದ ರೋಹಿತ್ ಶರ್ಮಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 127 ಹಾಗೂ ಚೇತೇಶ್ವರ್ ಪೂಜಾರ 61 ರನ್ ಗಳಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದರು.

ರೋಹಿತ್ ಮತ್ತು ಚೇತೇಶ್ವರ್ ಪೂಜಾರ ಐದನೇ ಟೆಸ್ಟ್ ಪಂದ್ಯಕ್ಕೂ ಅನುಮಾನ?
ಸೆಪ್ಟೆಂಬರ್ 10ರಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಸದ್ಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೊಳಗಾಗಿರುವ ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಚೇತರಿಸಿಕೊಳ್ಳಬೇಕಿದೆ. ಇಬ್ಬರೂ ಸಹ ವಿಶ್ರಾಂತಿ ತೆಗೆದುಕೊಳ್ಳುವಷ್ಟು ಗಾಯದ ಸಮಸ್ಯೆಗೆ ಒಳಗಾಗಿದ್ದು ಸದ್ಯ ವೈದ್ಯರ ನಿಗಾದಲ್ಲಿದ್ದಾರೆ. ಐದನೇ ಟೆಸ್ಟ್ ಪಂದ್ಯವಾಡಲು ಇಬ್ಬರೂ ಸಹ ಚೇತರಿಸಿಕೊಳ್ಳದ ಬೇಕಾದ ಅಗತ್ಯತೆ ಇರುವ ಕಾರಣದಿಂದಲೇ ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಿಂದ ಈ ಇಬ್ಬರನ್ನು ತಂಡದಿಂದ ಹೊರಗಿಡಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications