
ಅಡಿಲೇಡ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಣಿಕಟ್ಟಿಗೆ ಗಾಯಮಾಡಿಕೊಂಡಿದ್ದರು. ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದು ಆತಂಕಕ್ಕೆ ಕಾರಣವಾಗಿತ್ತು.
ಆದರೆ, ಕೆಲವೇ ಹೊತ್ತಿನಲ್ಲಿ ರೋಹಿತ್ ಶರ್ಮಾ ಮತ್ತೆ ಅಭ್ಯಾಸ ಮುಂದುವರೆಸಲು ನೆಟ್ಸ್‌ಗೆ ಆಗಮಿಸುವ ಮೂಲಕ ತಂಡದ ಆತಂಕ ದೂರ ಮಾಡಿದರು. ನಂತರ ಅವರು, ಬಹಳ ಹೊತ್ತು ಬ್ಯಾಟಿಂಗ್ ಅಭ್ಯಾಸ ಮಾಡಿದರು.
ಮುಂಜಾನೆ ರೋಹಿತ್ ಶರ್ಮಾ ಬಿಗ್ ಸೆಮಿಫೈನಲ್ ಮೊದಲು ನೆಟ್ಸ್‌ನಲ್ಲಿ ಗಾಯಗೊಂಡರು ಮತ್ತು ಅವರ ಮಣಿಕಟ್ಟಿಗೆ ಬಾಲ್ ಬಿದ್ದು ನೋವು ಅನುಭವಿಸಿದರು. ರೋಹಿತ್‌ಗೆ ಪೆಟ್ಟು ಬಿದ್ದ ತಕ್ಷಣ ಬ್ಯಾಟಿಂಗ್ ನಿಲ್ಲಿಸಿದರು. ಅವರು ನೋವಿನಿಂದ ನರಳುತ್ತಿರುವುದು ಕಂಡುಬಂದಿತು, ಫಿಸಿಯೋಗಳೊಂದಿಗೆ ಅವರು ಚರ್ಚೆ ಮಾಡುತ್ತಿರುವುದು ಕಂಡು ಬಂದಿತು. ನಂತರ ರೋಹಿತ್ ಗಾಯಗೊಂಡಿದ್ದ ಮಣಿಕಟ್ಟಿನ ಮೇಲೆ ಐಸ್ ಪ್ಯಾಕ್ ಹಾಕುತ್ತಿದ್ದರು.
ಐಚ್ಛಿಕ ತರಬೇತಿಯಲ್ಲಿ ಭಾಗವಹಿಸಿದ ಮೂವರು ಭಾರತೀಯ ತಂಡದ ಸದಸ್ಯರಲ್ಲಿ ರೋಹಿತ್ ಒಬ್ಬರು. ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಮೀಸಲು ಬೌಲರ್‌ಗಳಾದ ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು.

ನೋವಿನಿಂದ ನರಳಿದ ರೋಹಿತ್ ಶರ್ಮಾ
ಥ್ರೋ ಡೌನ್‌ಗಳನ್ನು ಎದುರಿಸುತ್ತಿರುವಾಗ ಚೆಂಡೊಂದು ಲೆಂಗ್ತ್‌ನಿಂದ ಬೌನ್ಸ್ ಆಗುವ ಮೂಲಕ ಮಣಿಕಟ್ಟಿನ ಬಳಿ ಬಡಿದಾಗ ಭಾರತೀಯ ನಾಯಕನಿಗೆ ಪೆಟ್ಟಾಯಿತು. ಅವರನ್ನು ತಂಡದ ಸಹಾಯಕ ಸಿಬ್ಬಂದಿ ತಕ್ಷಣವೇ ಗಾಯದ ಬಗ್ಗೆ ಕಾಳಜಿ ವಹಿಸಿದರು. ಸಂಕ್ಷಿಪ್ತ ಸಮಾಲೋಚನೆಯ ನಂತರ, ರೋಹಿತ್ ಮತ್ತೊಮ್ಮೆ ಬ್ಯಾಟಿಂಗ್ ಅಭ್ಯಾಸ ಮುಂದುವರೆಸಲು ಪ್ರಯತ್ನಿಸಿದರು ಆದರೆ ಒಂದು ಚೆಂಡನ್ನು ಎದುರಿಸಿದ ನಂತರ ಮತ್ತೆ ನೋವು ಹೆಚ್ಚಾದ ಕಾರಣ ಅವರು ಅಭ್ಯಾಸವನ್ನು ಸ್ಥಗಿತಗೊಳಿಸಿದರು.
ರೋಹಿತ್ ಶರ್ಮಾ ನೋವಿನಿಂದ ನರಳುವುದು ಟೀಂ ಇಂಡಿಯಾದ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಕೆಲ ಹೊತ್ತಿನ ವಿಶ್ರಾಂತಿ ಬಳಿಕ ರೋಹಿತ್ ಶರ್ಮಾ ಮತ್ತೆ ನೆಟ್‌ಗೆ ವಾಪಸ್ ಬಂದರು, ಮಾತ್ರವಲ್ಲದೆ ಅವರು ತಮ್ಮ ಬ್ಯಾಟಿಂಗ್ ಅಭ್ಯಾಸವನ್ನು ಮುಂದುವರೆಸಿದರು.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ರೋಹಿತ್ ಶರ್ಮಾ ಗಾಯಗೊಂಡರೆ ತಂಡಕ್ಕೆ ಬಹಳ ದೊಡ್ಡ ಹಿನ್ನಡೆಯಾಗಲಿದೆ. ಇದುವರೆಗೂ ತಂಡ ಬಹುತೇಕ ಸೆಟ್ ಆಗಿದ್ದು, ಪ್ರಮುಖ ಪಂದ್ಯದಲ್ಲಿ ನಾಯಕ ಹೊರಗುಳಿಯುವುದು ತಂಡಕ್ಕೆ ಇಷ್ಟವಿಲ್ಲ.