ಗುರುವಾರ, ಮಾರ್ಚ್ 7ರಿಂದ ಧರ್ಮಶಾಲಾದ ಎಚ್‌ಪಿಸಿಎ ಸ್ಟೇಡಿಯಂನಲ್ಲಿ ಆರಂಭವಾಗಿರುವ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಂದು ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಆತಿಥೇಯ ಭಾರತ ಮೇಲುಗೈ ಸಾಧಿಸಿದೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ 18ನೇ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು.

ಈ ಅರ್ಧಶತಕದೊಂದಿಗೆ ರೋಹಿತ್ ಶರ್ಮಾ ಅವರು ಭಾರತ ತಂಡದ ಟೆಸ್ಟ್ ನಾಯಕನಾಗಿ 1000 ರನ್‌ಗಳ ಗಡಿಯನ್ನು ದಾಟಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ 10ನೇ ನಾಯಕ ಎನಿಸಿಕೊಂಡರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 57.4 ಓವರ್‌ಗಳಲ್ಲಿ ಕೇವಲ 218 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕುಸಿತ ಕಂಡಿದೆ.

ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕದ ನೆರವಿನಿಂದ 1ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದ್ದು, ಇಂಗ್ಲೆಂಡ್‌ಗಿಂತ 83 ರನ್‌ಗಳ ಹಿನ್ನಡೆಯಲ್ಲಿದೆ.
ಇನ್ನು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ (5,864 ರನ್), ಎಂಎಸ್ ಧೋನಿ (3,454 ರನ್), ಸುನಿಲ್ ಗವಾಸ್ಕರ್ (3,449 ರನ್), ಮೊಹಮ್ಮದ್ ಅಜರುದ್ದೀನ್ (2,856 ರನ್), ಸೌರವ್ ಗಂಗೂಲಿ (2,561 ರನ್), ಮನ್ಸೂರ್ ಅಲಿಖಾನ್ ಪಟೌಡಿ (2,424 ರನ್), ಸಚಿನ್ ತೆಂಡೂಲ್ಕರ್ (2,054 ರನ್), ರಾಹುಲ್ ದ್ರಾವಿಡ್ (1,736 ರನ್) ಮತ್ತು ಕಪಿಲ್ ದೇವ್ (1,364 ರನ್) ಅವರಂತಹ ದಿಗ್ಗಜ ಭಾರತೀಯ ನಾಯಕರ ಪಟ್ಟಿಗೆ ಸೇರಿಕೊಂಡರು.
ರೋಹಿತ್ ಶರ್ಮಾ ಮತ್ತು ಸಹ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮೊದಲ ದಿನದಂದು ಅರ್ಧ ಶತಕಗಳನ್ನು ಬಾರಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಭಾರತ ಮೇಲುಗೈ ಸಾಧಿಸಲು ಸಹಾಯ ಮಾಡಿದರು.
58 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 57 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಅವರನ್ನು ಶೋಯೆಬ್ ಬಶೀರ್ ಔಟ್ ಮಾಡುವ ಮೊದಲು, ಇಬ್ಬರು ಆರಂಭಿಕರು ಮೊದಲ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ನಿರ್ಮಿಸಿದರು.
ನಾಯಕ ರೋಹಿತ್ ಶರ್ಮಾ 83 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 52 ರನ್ ಗಳಿಸಿ ಅಜೇಯರಾಗಿ ದಿನದಾಟವನ್ನು ಅಂತ್ಯಗೊಳಿಸಿದರು. ಇನ್ನು ಶುಭ್ಮನ್ ಗಿಲ್ ಜೊತೆಗೆ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ 26 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ಮೊದಲ ದಿನದಂದು 218 ರನ್‌ಗಳಿಗೆ ಆಲೌಟ್ ಆಗಿತ್ತು. ಉತ್ತಮ ಆರಂಭದ ಹೊರತಾಗಿಯೂ, ಇಂಗ್ಲೆಂಡ್ ಎರಡನೇ ಮತ್ತು ಮೂರನೇ ಸೆಷನ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳ ಮಾರಕ ಬೌಲಿಂಗ್ ಎದುರು ಕುಸಿತಕ್ಕೆ ಶರಣಾಯಿತು.
ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಭಾರತೀಯ ಬೌಲರ್‌ಗಳ ಪೈಕಿ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಬಾರಿಗೆ 5 ವಿಕೆಟ್‌ಗಳನ್ನು ಪಡೆದರು. ಕುಲದೀಪ್ ಯಾದವ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 15 ಓವರ್‌ಗಳಲ್ಲಿ 72 ರನ್ ನೀಡಿ 5 ವಿಕೆಟ್ ಪಡೆದರು.
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜಾನಿ ಬೈರ್‌ಸ್ಟೋವ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್‌ನ ಅಗ್ರ ಮತ್ತು ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಬಲವನ್ನು ಮುರಿದರು.
ಇನ್ನು ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಭಾರತ ತಂಡಕ್ಕೆ ಆಸರೆಯಾದರು.
ರವಿಚಂದ್ರನ್ ಅಶ್ವಿನ್ ಅವರು ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್ ಮತ್ತು ಜೇಮ್ಸ್ ಆಂಡರ್ಸನ್ ಅವರನ್ನು ಹೊರಹಾಕುವ ಮೂಲಕ ಇಂಗ್ಲೆಂಡ್‌ನ ಬಾಲಂಗೋಚಿಗಳನ್ನು ಪೆವಿಲಿಯನ್ ಸೇರಿಸಿದರು.
ಝಾಕ್ ಕ್ರಾಲಿ 108 ಎಸೆತಗಳಲ್ಲಿ 11 ಬೌಂಡರಿ ಮತ್ತು ಏಕೈಕ ಸಿಕ್ಸರ್ ಸಮೇತ 79 ರನ್ ಗಳಿಸಿ ಪ್ರವಾಸಿ ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ತನ್ನ 100ನೇ ಟೆಸ್ಟ್ ಪಂದ್ಯವನ್ನು ಆಡಲು ಬಂದ ಜಾನಿ ಬೈರ್‌ಸ್ಟೋವ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್‌ಗಳ ಗಡಿಯನ್ನು ದಾಟಲು ತ್ವರಿತ 29 ರನ್ ಗಳಿಸಿದರು. ಈ ಸಾಧನೆ ಮಾಡಿದ 17ನೇ ಇಂಗ್ಲೆಂಡ್ ಆಟಗಾರರಾದರು.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಈಗಾಗಲೇ 3-1 ಅಂತರದಲ್ಲಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಐದು ಪಂದ್ಯಗಳ ಸರಣಿಯನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಗುರಿಯನ್ನು ಹೊಂದಿದೆ.