ಬುಧವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಅವರು ಮುನ್ನಡೆಸಲಿದ್ದಾರೆ ಎಂದು ಘೋಷಿಸಿದರು. ಈ ಹೇಳಿಕೆ ಬಂದ ಮೇಲೆ ರೋಹಿತ್ ಶರ್ಮಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಅಮೋಘ ಇನಿಂಗ್ಸ್ ಕಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಲು ಮುಂದಾಯಿತು. ಟಾಪ್ ಆರ್ಡರ್ ಬ್ಯಾಟರ್‌ಗಳು ಒಂದು ತುದಿಯಲ್ಲಿ ವಿಕೆಟ್‌ಗಳನ್ನು ನೀಡುತ್ತಾ ಸಾಗಿದರು. ಆದರೆ ರೋಹಿತ್ ಶರ್ಮಾ ಭರ್ಜರಿ ಪ್ರದರ್ಶನ ನೀಡಿದರು. ನಾಯಕ ರೋಹಿತ್ ಶರ್ಮಾ ಅವರ ಜೊತೆಗೆ ಆಲ್‌ರೌಂಡರ್ ರವೀಂದ್ರ ಜಡೇಜಾ ಜೊತೆಗೆ ಶತಕದ ಜೊತೆಯಾಟವನ್ನು ನೀಡಿದರು. ಅಲ್ಲದೆ ರಾಜ್‌ಕೋಟ್ ಅಂಗಳದಲ್ಲಿ ಅಬ್ಬರಿಸಿದರು.

ಟಾಮ್ ಹಾರ್ಟ್ಲಿ ಅವರ ಬೌಲಿಂಗ್ ವೇಳೆ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಜೀವದಾನ ಲಭಿಸಿತು. ಪಂದ್ಯದ 13ನೇ ಓವರ್‌ನಲ್ಲಿ ಸ್ವೀಪ್ ಶಾಟ್ ಬಾರಿಸಲು ಮುಂದಾಗಿ ಚೆಂಡು ಗಾಳಿಯಲ್ಲಿ ತೇಲುತ್ತದೆ. ಆಗ ಜೋ ರೂಟ್ ಕ್ಯಾಚ್ ಡ್ರಾಪ್ ಮಾಡಿದರು.

ಇದರ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಅಲ್ಲದೆ ತಮ್ಮ ಬ್ಯಾಟಿಂಗ್ ಮೇಲೆ ಇದ್ದ ಪ್ರಶ್ನೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದರು.
ಸುಮಾರು 217 ದಿನಗಳ ಬಳಿಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಸಂಭ್ರಮವನ್ನು ಆಚರಿಸಿದರು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರೋಹಿತ್ ರೋಸೌ ಅಂಗಳದಲ್ಲಿ ಜುಲೈ 13 ರಂದು ಕೊನೆಯ ಬಾರಿಗೆ ಮೂರಂಕಿಯ ಮೊತ್ತವನ್ನು ದಾಟಿದ್ದರು. ಇದಾದ ಬಳಿಕ ಗುರುವಾರ ರೋಹಿತ್ ಶತಕ ಬಾರಿಸಿ ಸಂಭ್ರಮಿಸಿದರು.
ರೋಹಿತ್ ತಮ್ಮ ನೈಜ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಅವರು ಆರಂಭದಲ್ಲಿ ಎಚ್ಚರಿಕೆಯ ಆಟವನ್ನು ಆಡಿದರು. ಇವರು 70 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇಲ್ಲಿಂದ ರೋಹಿತ್ ತಮ್ಮ ಖದರ್ ಪ್ರಸ್ತುತ ಪಡಿಸಿದರು. ರಾಜ್‌ಕೋಟ್ ಅಂಗಳದಲ್ಲಿ ರೋಹಿತ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು.
ರೋಹಿತ್ ಶರ್ಮಾ ಅವರ ಶತಕದ ಇನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿವೆ. ಬ್ಯಾಟಿಂಗ್ ಪ್ಯಾರೆಡೈಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್ ಅಬ್ಬರಿಸಿದರು. ಈ ಮೂಲಕ ಟೀಮ್ ಇಂಡಿಯಾ ಕ್ಯಾಪ್ಟನ್ ಶತಕ ಬಾರಿಸಿ ಆರ್ಭಟಿಸಿದರು.
ಒತ್ತಡದಲ್ಲಿದ್ದ ತಂಡಕ್ಕೆ ರೋಹಿತ್ ಶರ್ಮಾ ಆಧಾರವಾದರು. 157 ಎಸೆತಗಳಲ್ಲಿ ರೋಹಿತ್ ಅಜೇಯ 101 ರನ್ ಬಾರಿಸಿದರು. ಆರಂಭಿಕರಾಗಿ ಎಂಟನೇ ಶತಕ ಬಾರಿಸಿದ ರೋಹಿತ್ ಶರ್ಮಾ, ಇಂಗ್ಲೆಂಡ್ ಬೌಲರ್‌ಗಳನ್ನು ಕಾಡುತ್ತಿದ್ದು, ಬಿಗ್ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದಾರೆ.