ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 27 ವರ್ಷದ ವೇಗಿಯೊಬ್ಬರು ಇತಿಹಾಸ ಸೃಷ್ಟಿಸಿದ್ದಾರೆ. ಇಂಗ್ಲೆಂಡ್ ತಂಡದ ವೇಗದ ಬೌಲರ್ ಸಾಕಿಬ್ ಮಹಮೂದ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಎಲ್ಲರ ಚಿತ್ತ ಕದ್ದಿದ್ದಾರೆ. ಭಾರತ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಆಡುವ ಹನ್ನೊಂದರ ಬಗಳದಲ್ಲಿ ಸಾಕಿಬ್ ಮಹಮೂದ್ ಮೊದಲ ಬಾರಿಗೆ ಅವಕಾಶ ಪಡೆದಿದ್ದರು. ಸಿಕ್ಕ ಅವಕಾಶದಲ್ಲಿ ಸಾಕಿಬ್ ಮಹಮೂದ್ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಸಾಕಿಬ್ ಮಹಮೂದ್ ತನ್ನ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಬಲಿ ಪಡೆದರು. ಈ ಮೂಲಕ ಅವರು ತಮ್ಮ ಮೊದಲ ಓವರ್‌ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದರು.

ಭಾರತ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ವೇಗಿ ಮಾರ್ಕ್ ವುಡ್ ಬದಲಿಗೆ ಸಾಕಿಬ್ ಮಹಮೂದ್ ಆಡುವ ಅವಕಾಶವನ್ನು ಪಡೆದರು. ಅವರು ತಮ್ಮ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಿದರು. ಅದಕ್ಕಿಂತ ಹೆಚ್ಚಾಗಿ ಈ ಓವರ್‌ನಲ್ಲಿ ಯಾವುದೇ ರನ್ ಬಿಟ್ಟು ಕೊಡಲಿಲ್ಲ. ಸ್ಯಾಮ್ಸನ್ ಕೇವಲ ಒಂದು ರನ್ ಗಳಿಸಲಾಗಿದ್ದರೆ, ತಿಲಕ್ ಮತ್ತು ಸೂರ್ಯ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಓವರ್‌ನೊಂದಿಗೆ ಸಾಕಿಬ್ ಇತಿಹಾಸ ಸೃಷ್ಟಸಿದರು.
ಸಾಕಿಬ್ ಮಹಮೂದ್ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ವಿರುದ್ಧ ಮೂರು ವಿಕೆಟ್ ಮೇಡನ್ ಓವರ್ ಮಾಡಿದ ಮೊದಲ ಇಂಗ್ಲೆಂಡ್ ಆಟಗಾರ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತದ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪಂದ್ಯದಲ್ಲಿ ಸಾಕಿಬ್ ತಮ್ಮ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳಿಗೆ ಮೂರು ವಿಕೆಟ್ ಉರುಳಿಸಿದರು.
ಶಿವಂ ದುಬೆ ಬದಲಿಗೆ ಹರ್ಷಿತ್ ರಾಣಾ ಅವರು ಕನ್ಕ್ಯುಶನ್ ಬದಲಿಯಾಗಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಾಲ್ಕನೇ ಟಿ20 ಪಂದ್ಯದಲ್ಲ ಇಂಗ್ಲೆಂಡ್ ತಂಡ 182 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಹರ್ಷಿತ್ ರಾಣಾ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಅವರು ತಮ್ಮ 4 ಓವರ್ ಗಳಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿ ಇಂಗ್ಲೆಂಡ್ ದವಡೆಯಿಂದ ಗೆಲುವನ್ನು ಕಸಿದುಕೊಂಡರು.