ಇಂಗ್ಲೆಂಡ್ ವಿರುದ್ಧ ಭಾರತ ಸೋತರೆ ಆ ಒಬ್ಬ ಆಟಗಾರ ತಂಡದಲ್ಲಿ ಇಲ್ಲದಿರುವುದೇ ಕಾರಣ ಎಂದ ಶೇನ್ ವಾರ್ನ್!

ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ.ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಈ ಎರಡನೇ ಟೆಸ್ಟ್ ಪಂದ್ಯದ 4 ದಿನಗಳು ಈಗಾಗಲೇ ಮುಕ್ತಾಯವಾಗಿದ್ದು ಐದನೇ ದಿನದಾಟ ಆಗಸ್ಟ್ 16ರ ಸೋಮವಾರದಂದು ನಡೆಯಲಿದೆ. ಈ ಪಂದ್ಯದ ಕುರಿತು ಇದೀಗ ಆಸ್ಟ್ರೇಲಿಯದ ಮಾಜಿ ಆಟಗಾರ ಶೇನ್ ವಾರ್ನ್ ಮಾತನಾಡಿದ್ದು ಸ್ಪಿನ್ ಬೌಲರ್‌ಗಳ ಅಲಭ್ಯತೆ ಸೋಲಿಗೆ ಕಾರಣವಾಗಬಹುದು ಎಂದಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 364 ರನ್ ಕಲೆ ಹಾಕಿತ್ತು. ಹಾಗೂ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 391 ರನ್ ಬಾರಿಸುವುದರ ಮೂಲಕ 27 ರನ್‌ಗಳ ಅಲ್ಪ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ಅಕ್ಷರಶಃ ನೇರಾನೇರ ಪೈಪೋಟಿಯಿಂದ ಕೂಡಿತ್ತು. ಹೀಗಾಗಿ ಎರಡನೇ ಇನ್ನಿಂಗ್ಸ್ ಮೇಲೆ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿತ್ತು. ಟೀಮ್ ಇಂಡಿಯಾ ಉತ್ತಮ ರನ್ ಕಲೆ ಹಾಕುವುದರ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಕಠಿಣ ಮೊತ್ತದ ಸವಾಲನ್ನು ನೀಡಲಿದೆ ಎಂದು ಎಣಿಸಲಾಗಿತ್ತು.
ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ನೀರಸ ಆರಂಭವನ್ನು ಪಡೆದುಕೊಂಡಿತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಮಿಂಚಿದ್ದ ರೋಹಿತ್ ಶರ್ಮ 21 ಮತ್ತು ಕೆಎಲ್ ರಾಹುಲ್ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನುಳಿದಂತೆ ಪೂಜಾರಾ 45 ರನ್ ಬಾರಿಸಿದರೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು, ಎಂದಿನಂತೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವ ನಾಯಕ ವಿರಾಟ್ ಕೊಹ್ಲಿ 20 ರನ್ ಬಾರಿಸಿ ಮತ್ತೆ ನಿರಾಸೆ ಮೂಡಿಸಿದರು ಮತ್ತು ಕಳೆದ ಪಂದ್ಯಗಳಲ್ಲಿ ಮಂಕಾಗಿದ್ದ ಅಜಿಂಕ್ಯ ರಹಾನೆ 61 ರನ್ ಬಾರಿಸಿ ಅರ್ಧಶತಕ ಸಿಡಿಸಿದರು. ಸದ್ಯ ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡಿರುವ ಟೀಮ್ ಇಂಡಿಯಾ 181 ರನ್ ಗಳಿಸಿದ್ದು ರಿಷಭ್ ಪಂತ್ 14 ಮತ್ತು ಇಶಾಂತ್ ಶರ್ಮಾ 4 ರನ್ ಕಲೆ ಹಾಕಿದ್ದು ಐದನೇ ದಿನದಾಟ ಆರಂಭಿಸಲು ಕಾಯುತ್ತಿದ್ದಾರೆ.
ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಬ್ಯಾಟ್ಸ್‌ಮನ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಮಂಕಾಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಮಾರ್ಕ್ ವುಡ್ 3 ವಿಕೆಟ್, ಮೊಯಿನ್ ಅಲಿ 2 ವಿಕೆಟ್ ಮತ್ತು ಸ್ಯಾಮ್ ಕರನ್ ಒಂದು ವಿಕೆಟ್ ಪಡೆದಿದ್ದಾರೆ. ಈ ಕುರಿತು ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಮಾತನಾಡಿದ್ದು ಟೀಮ್ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ಪಿನ್ ಬೌಲರ್‌ಗಳಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು ಎಂದು ಈ ಕೆಳಕಂಡಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓರ್ವ ಸ್ಪಿನ್ನರ್ ಇಡೀ ಪಂದ್ಯವನ್ನೇ ಬದಲಿಸಿದ ಎಂದ ಶೇನ್ ವಾರ್ನ್
ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ ಪರ ಕಣಕ್ಕಿಳಿಯದೇ ಇದ್ದ ಮೊಯಿನ್ ಅಲಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಹೀಗೆ ಕಣಕ್ಕಿಳಿಯುವುದರ ಮೂಲಕ ಮೊದಲನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದಿದ್ದ ಮೊಯಿನ್ ಅಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ 2 ವಿಕೆಟ್‍ಗಳನ್ನು ಪಡೆದುಕೊಳ್ಳುವುದರ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದಾರೆ. ಹೌದು ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಅಜಿಂಕ್ಯ ರಹಾನೆ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 61 ರನ್ ಕಲೆ ಹಾಕಿ ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದ್ದ ವೇಳೆ ಮೊಯಿನ್ ಅಲಿ ಎಸೆತಕ್ಕೆ ಬಲಿಯಾದರು ಹಾಗೂ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ಕೂಡ ಕೇವಲ 3 ರನ್ ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಹೀಗೆ ಸ್ಪಿನ್ನರ್ ಓರ್ವ ಟೀಮ್ ಇಂಡಿಯಾದ 2ಪ್ರಮುಖ ವಿಕೆಟ್‍ಗಳನ್ನು ಪಡೆಯುವುದರ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದಾರೆ ಎಂದು ಶೇನ್ ವಾರ್ನ್ ಶ್ಲಾಘಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಇರಬೇಕಿತ್ತು
ಇಂಗ್ಲೆಂಡ್ ತಂಡದ ಮೊಯಿನ್ ಅಲಿ ಉತ್ತಮ ಪ್ರದರ್ಶನ ನೀಡಿ ಎರಡನೇ ಇನ್ನಿಂಗ್ಸ್‌ನಲ್ಲಿ ಪಂದ್ಯವೇ ಪಥ ಬದಲಿಸುವಂತಹ ಬೌಲಿಂಗ್ ಮಾಡಿದ ಕುರಿತು ಮಾತನಾಡಿರುವ ಶೇನ್ ವಾರ್ನ್ ಟೀಮ್ ಇಂಡಿಯಾ ರವಿಚಂದ್ರನ್ ಅಶ್ವಿನ್ ರೀತಿಯ ಸ್ಪಿನ್ ಬೌಲರ್‌ಗೆ ಆದ್ಯತೆ ನೀಡಬೇಕಿತ್ತು ಎಂದಿದ್ದಾರೆ. ಟೀಮ್ ಇಂಡಿಯಾ ಆಯ್ಕೆ ಮಾಡಿರುವ ತಂಡ ಮೊದಲನೇ ಇನ್ನಿಂಗ್ಸ್‌ಗೆ ಸರಿಯಾದ ತಂಡವಾಗಿತ್ತು ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕೆಂದರೆ ಸ್ಪಿನ್ ಬೌಲರ್‌ಗಳ ಅಗತ್ಯತೆಯಿದೆ ಎಂದು ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿ ಭಾರತವನ್ನು ಸಮಸ್ಯೆಗೆ ದೂಡಲಿದೆ ಎಂಬುದನ್ನು ಪರೋಕ್ಷವಾಗಿ ಶೇನ್ ವಾರ್ನ್ ತಿಳಿಸಿದ್ದಾರೆ.

ಇಂಗ್ಲೆಂಡ್ ಪಿಚ್‌ಗಳಿಗೆ ಸ್ಪಿನ್ ಬೌಲರ್‌ಗಳು ಇರಬೇಕು
ಇಂಗ್ಲೆಂಡ್ ಪಿಚ್‌ಗಳಲ್ಲಿ ವೇಗಿಗಳಿಗೆ ಹೆಚ್ಚು ಅನುಕೂಲ ಎಂದು ಭಾವಿಸುವುದು ತಪ್ಪು. ಪಂದ್ಯದ ಅರ್ಧ ಭಾಗ ಮುಗಿದ ನಂತರ ಇಂಗ್ಲೆಂಡ್ ಪಿಚ್‌ನಲ್ಲಿ ಬದಲಾವಣೆಗಳಾಗಲಿವೆ ಹಾಗೂ ಸ್ಪಿನ್ ಬೌಲರ್‌ಗಳು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಲು ಶುರು ಮಾಡುತ್ತಾರೆ. ಹೀಗಾಗಿ ಪಂದ್ಯ ಗೆಲ್ಲುವುದಕ್ಕೋಸ್ಕರ ತಂಡಗಳು ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಶೇನ್ ವಾರ್ನ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕಿತ್ತು ಎಂಬರ್ಥದಲ್ಲಿ ಶೇನ್ ವಾರ್ನ್ ಟೀಮ್ ಇಂಡಿಯಾ ಆಟಗಾರರ ಆಯ್ಕೆಯನ್ನು ಟೀಕಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications