IND VS ENG T20: ಭಾರತ vs ಇಂಗ್ಲೆಂಡ್ ಹೆಡ್ ಟು ಹೆಡ್ ದಾಖಲೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಇಂದು ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ನಾಯಕನ್ನಾಗಿ ಮುನ್ನಡೆಸಿದರೆ, ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ನಾಯಕತ್ವ ವಹಿಸಲಿದ್ದಾರೆ. ಈಗಾಗಲೇ ಇಂಗ್ಲೆಂಡ್ ಇಂದಿನ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ತನ್ನ ಪ್ಲೇಯಿಂಗ್-11 ಅನ್ನು ಘೋಷಿಸಿದೆ. ಭಾರತ ಆಡುವ ಹನ್ನೊಂದರ ಬಳಗದ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಪ್ರಾಬಲ್ಯವನ್ನು ಸಾಧಿಸಿದೆ. ಇದೀಗ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಹೆಡ್ ಟು ಹೆಡ್ ದಾಖಲೆ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಇಲ್ಲಿಯವರೆಗೆ 24 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 11 ಪಂದ್ಯಗಳನ್ನು ಗೆದ್ದಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಭಾರತ ತಂಡವು ಇಂಗ್ಲೆಂಡ್ ಮೇಲೆ ಮೇಲುಗೈ ಸಾಧಿಸಿದಂತಿದೆ. ಇದೀಗ ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ತನ್ನ ದಾಖಲೆಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಯೋಜನೆಯಲ್ಲಿದೆ.
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 218 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವನ್ನು 200 ರನ್‌ಗಳಿಗೆ ಭಾರತ ಕಟ್ಟಿ ಹಾಕಿತ್ತಿ. ಈ ಮೂಲಕ 18 ರನ್‌ಗಳಿಂದ ಭಾರತ ಗೆಲುವು ಸಾಧಿಸಿತ್ತು. ಇದಾದ ನಂತರ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಕೊನೆಯ ಟಿ20 ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 171 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಕೇವಲ 103 ರನ್‌ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ 68 ರನ್‌ಗಳಿಂದ ಗೆದ್ದು ಬೀಗಿತ್ತು.
ಭಾರತ ಮತ್ತು ಇಂಗ್ಲೆಂಡ್ ವಿರುದ್ಧ 2022ರಲ್ಲಿ ಕೊನೆಯ ಬಾರಿಗೆ ಟಿ20 ಸರಣಿ ನಡೆದಿತ್ತು. ಈ ಸರಣಿಯಲ್ಲಿ ತವರಿನಲ್ಲಿ 2-1 ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೋಲಿಸಿತು. ಮೊದಲ ಪಂದ್ಯದಲ್ಲಿ ಭಾರತ 50 ರನ್‌ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ 49 ರನ್‌ಗಳಿಂದ ಗೆದ್ದಿತ್ತು. ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ 17 ರನ್‌ಗಳಿಂದ ಭಾರತವನ್ನು ಸೋಲಿಸಿತು. ಇದರೊಂದಿಗೆ ಭಾರತ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿತ್ತು.
ಈ ಬಾರಿ ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡಕ್ಕೆ ಹಲವು ಸವಾಲುಗಳಿವೆ. ಟಿ20 ಚಾಂಪಿಯನ್ ಭಾರತ ತಂಡವನ್ನು ಸೋಲಿಸುವುದು ಇಂಗ್ಲೆಂಡ್‌ಗೆ ದೊಡ್ಡ ತಲೆ ನೋವಾಗಿದೆ. ಭಾರತ ಕೂಡ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸತತ ಮೂರು ಟಿ20 ಸರಣಿ ಗೆದ್ದು ದಾಖಲೆ ಸೃಷ್ಟಿಸಿದೆ.
ಉಭಯ ತಂಡಗಳು
ಇಂಗ್ಲೆಂಡ್ ಪ್ಲೇಯಿಂಗ್-11
ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್‌ಕೀಪರ್), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್‌ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications