ಭಾನುವಾರ, ಜನವರಿ 4ರಂದು ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 3ನೇ ದಿನದಂದು ಭಾರತದ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಅಮೋಘ ಶತಕದೊಂದಿಗೆ ತಮ್ಮ ಕಳಪೆ ಫಾರ್ಮ್‌ನಿಂದ ಹೊರಬಂದರು.
ಶುಭ್ಮನ್ ಗಿಲ್ ಮೊದಲು 13 ಟೆಸ್ಟ್ ಇನ್ನಿಂಗ್ಸ್‌ಗಳ ನಂತರ ತಮ್ಮ ಮೊದಲ ಅರ್ಧಶತಕ ಗಳಿಸಿದರು. ನಂತರ ತಮ್ಮ ಆಕ್ರಮಣಕಾರಿ ಇನ್ನಿಂಗ್ಸ್ ಮುಂದುವರೆಸಿ ಟೆಸ್ಟ್ ವೃತ್ತಿಜೀವನದ 3ನೇ ಶತಕವನ್ನು ಬಾರಿಸಿದರು.
ಇದೇ ವೇಳೆ ದಿನದ ಆರಂಭದಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಅವರ ಮಾರಕ ಬೌಲಿಂಗ್ ಪ್ರದರ್ಶನದ ನಂತರ, ಆತಿಥೇಯ ಭಾರತ ತಂಡವು ಸಂಕಷ್ಟದಿಂದ ಹೊರಬರಲು ನೆರವಾದರು.

ಶುಭ್ಮನ್ ಗಿಲ್ 60 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಲಾಂಗ್-ಆಫ್ ಮೂಲಕ ಒಂದು ಬೌಂಡರಿಯೊಂದಿಗೆ ದಿನದ ಮೊದಲ ಅವಧಿಯಲ್ಲಿ ಭಾರತ ತಂಡದ ಮುನ್ನಡೆಯನ್ನು 250 ರನ್‌ಗಳಿಗೆ ದಾಟಿಸಿದರು.
ಇದೀಗ ಭರ್ಜರಿ ಶತಕ ಬಾರಿಸುವ ಮೂಲಕ ಶುಭ್ಮನ್ ಗಿಲ್ ತಮ್ಮ ಟೀಕಾಕಾರರಿಗೆ ಬ್ಯಾಟ್‌ನೊಂದಿಗೆ ಉತ್ತರಿಸಿದ್ದಾರೆ. 132 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಮೇತ ಶತಕ ಪೂರ್ಣಗೊಳಿಸಿದರು.
2023ರಲ್ಲಿ ವೆಸ್ಟ್ ಇಂಡೀಸ್ ಸರಣಿಯ ನಂತರ ಶುಭ್ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್‌ನೊಂದಿಗೆ ಹೆಣಗಾಡುತ್ತಿದ್ದರು. ಗಮನಾರ್ಹವಾಗಿ, ಶುಭ್ಮನ್ ಗಿಲ್ ಕಳೆದ 5 ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಅರ್ಧಶತಕವೂ ಇಲ್ಲದೆ ಔಟಾಗಿದ್ದರು ಮತ್ತು ಬಲಗೈ ಬ್ಯಾಟರ್ ಮೇಲೆ ಒತ್ತಡ ಹೆಚ್ಚುತ್ತಲೇ ಇತ್ತು.

ಇದೀಗ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಶತಕ ಬಾರಿಸುವ ಮೂಲಕ ಶುಭ್ಮನ್ ಗಿಲ್ ನಿರಾಳರಾಗಿದ್ದಾರೆ ಮತ್ತು ಭಾರತ ತಂಡಕ್ಕೆ ದೊಡ್ಡ ಆತಂಕವೊಂದು ದೂವಾಗಿದೆ.
ವಾಸ್ತವವಾಗಿ, ವಿಶಾಖಪಟ್ಟಣದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್ಮನ್ ಗಿಲ್ ಅವರ ಶತಕವು 2017ರಿಂದ ಭಾರತ ತಂಡಕ್ಕೆ ತವರಿನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟರ್ ಗಳಿಸಿದ ಮೊದಲ ಮೂರು ಅಂಕಿಗಳ ಸ್ಕೋರ್ ಆಗಿದೆ.
2017ರ ನವೆಂಬರ್‌ನಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರು ತವರಿನಲ್ಲಿ 3ನೇ ಕ್ರಮಾಂಕದಲ್ಲಿ ಭಾರತಕ್ಕಾಗಿ ಕೊನೆಯ ಶತಕ ಗಳಿಸಿದ್ದರು.
ಅಂತಿಮವಾಗಿ ಶುಭ್ಮನ್ ಗಿಲ್ 147 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 104 ರನ್ ಗಳಿಸಿ ಶೊಯೇಬ್ ಬಶೀರ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಬೆನ್ ಫೋಕ್ಸ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಇನ್ನು ಐದನೇ ವಿಕೆಟ್‌ಗೆ ಶುಭ್ಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಜೋಡಿ 151 ಎಸೆತಗಳಲ್ಲಿ 89 ರನ್‌ಗಳ ಅಮೂಲ್ಯ ಜೊತೆಯಾಟ ನಿರ್ಮಿಸಿದರು.
ಸದ್ಯದ ವರದಿಯ ಪ್ರಕಾರ, ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಕಲೆಹಾಕಿದ್ದು, ಒಟ್ಟಾರೆ 361 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಅಕ್ಷರ್ ಪಟೇಲ್ 44 ರನ್ ಗಳಿಸಿ ಆಡುತ್ತಿದ್ದರೆ, ಕೆಎಸ್ ಭರತ್ 1 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ದ್ವಿಶತಕದ ಸಹಾಯದಿಂದ 396 ರನ್‌ಗಳಿಗೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 47 ರನ್ ನೀಡಿ 3 ವಿಕೆಟ್ ಪಡೆದರೆ, ಶೋಯೆಬ್ ಬಶೀರ್ ಮತ್ತು ರೆಹಾನ್ ಅಹ್ಮದ್ ತಲಾ ಮೂರು ವಿಕೆಟ್ ಕಬಳಿಸಿದರು.
ಅಂತಿಮವಾಗಿ ಇಂಗ್ಲೆಂಡ್ ತಂಡ 55.5 ಓವರ್‌ಗಳಲ್ಲಿ 253 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ದೊಡ್ಡ ಹಿನ್ನಡೆ ಅನುಭವಿಸಿತು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಮಾರಕ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 15.5 ಓವರ್‌ಗಳಲ್ಲಿ 45 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಕುಲದೀಪ್ ಯಾದವ್ 17 ಓವರ್‌ಗಳಲ್ಲಿ 71 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.