'ಅರ್ಧಶತಕ ಬಾರಿಸಿದ ಕೊಹ್ಲಿ' ಎನ್ನುತ್ತಾ ವಿರಾಟ್ ಕೊಹ್ಲಿ ಕಾಲೆಳೆದ ಕ್ರೀಡಾ ಪತ್ರಕರ್ತ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ತೃತೀಯ ಪಂದ್ಯ ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳು ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ. ಇನ್ನು ಹೇಡಿಂಗ್ಲೆ ಅಂಗಳದಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಬುಧವಾರ ( ಆಗಸ್ಟ್ 25 ) ಆರಂಭವಾಗಿದ್ದು ಭಾರೀ ಕುತೂಹಲವನ್ನು ಮೂಡಿಸಿದೆ.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 151 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿತ್ತು. ಲಾರ್ಡ್ಸ್ ಪಂದ್ಯ ಗೆದ್ದ ಬಳಿಕ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯವನ್ನೂ ಸಹ ಗೆದ್ದು ಸರಣಿಯನ್ನು ಬಹುತೇಕ ಕೈವಶ ಮಾಡಿಕೊಳ್ಳುವ ಯೋಜನೆಯಲ್ಲಿದ್ದ ಟೀಮ್ ಇಂಡಿಯಾ ತಂಡಕ್ಕೆ ಪಂದ್ಯದ ಆರಂಭದಲ್ಲಿಯೇ ಆಘಾತವಾಗಿದೆ. ಹಲವಾರು ಪಂದ್ಯಗಳ ನಂತರ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರ ಕೈಕೊಟ್ಟಂತೆ ಕಾಣುತ್ತಿದೆ ಕಳೆದ ಲಾರ್ಡ್ಸ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದ್ದಾರೆ. ಮೊದಲನೇ ಓವರ್‌ನಲ್ಲಿಯೇ ಆ್ಯಂಡರ್ಸನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್ ಪೆವಿಲಿಯನ್ ಕಡೆ ಪಯಣ ಬೆಳೆಸಿದರು. ನಂತರ ಬಂದ ಚೇತೇಶ್ವರ್ ಪೂಜಾರ 1 ರನ್ ಕಲೆ ಹಾಕಿ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ್ದು, ವಿರಾಟ್ ಕೊಹ್ಲಿ 17 ಎಸೆತಗಳನ್ನು ಎದುರಿಸಿ 7 ರನ್ ಬಾರಿಸುವುದರ ಮೂಲಕ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ಮಂಕಾಗಿದ್ದಾರೆ.
ಹೀಗೆ ಲೀಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾದ ಪ್ರಮುಖ 3 ವಿಕೆಟ್‍ಗಳನ್ನು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಪಡೆದುಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ನೀಡುವುದರ ಮೂಲಕ ತಮ್ಮ ಕೆಟ್ಟ ಫಾರ್ಮ್‌ನ್ನು ಮುಂದುವರೆಸಿದ್ದು, ವಿರಾಟ್ ಕೊಹ್ಲಿ ನೀಡಿದ ಕಳಪೆ ಪ್ರದರ್ಶನದ ಕುರಿತು ನೆಟ್ಟಿಗರು ಈ ಕೆಳಕಂಡಂತೆ ಕಾಲೆಳೆದಿದ್ದಾರೆ..

ಅರ್ಧ ಶತಕ ಬಾರಿಸಿದ ವಿರಾಟ್ ಕೊಹ್ಲಿ ಎಂದು ಕಾಲೆಳೆದ ಕ್ರೀಡಾ ಪತ್ರಕರ್ತ!
ಭಾರತ ಮತ್ತು ಇಂಗ್ಲೆಂಡ್ ನಡುವೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 17 ಎಸೆತಗಳಲ್ಲಿ ಕೇವಲ 7 ರನ್ ಬಾರಿಸಿ ಔಟ್ ಆಗುವುದರ ಮೂಲಕ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗೆ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಕಾಲೆಳೆದಿರುವ ಆಸ್ಟ್ರೇಲಿಯಾದ ಕ್ರೀಡಾ ಪತ್ರಕರ್ತ ನಿಕ್ ಸಾವೇಜ್ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದ ಕುರಿತು ಕಾಲೆಳೆದಿರುವ ನಿಕ್ 'ಯಾವುದೇ ಶತಕ ಬಾರಿಸದೇ ಸತತವಾಗಿ 50 ಅಂತಾರಾಷ್ಟ್ರೀಯ ಇನ್ನಿಂಗ್ಸ್ ಪೂರೈಸಿರುವ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಅರ್ಧಶತಕದ ಸಂಭ್ರಮ' ಎಂದು ಟ್ವೀಟ್ ಮಾಡಿದ್ದಾರೆ.

ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವ ಸಮಯವಿದು!
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ವಿರುದ್ಧ ಕಿಡಿಕಾರಿರುವ ಅಭಿಮಾನಿಯೋರ್ವ ಇಬ್ಬರನ್ನೂ ಸಹ ತಂಡದಿಂದ ಕೈ ಬಿಡುವುದಕ್ಕೆ ಇದು ಸರಿಯಾದ ಸಮಯ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿರಾಟ್ ಗಂಗೂಲಿ ರೀತಿ ಬದಲಾಗ್ತಾ ಇದ್ದಾರೆ
ಮತ್ತೋರ್ವ ನೆಟ್ಟಿಗ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನವನ್ನು ಸೌರವ್ ಗಂಗೂಲಿ ಅವರ ಜೊತೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ. ಇತ್ತೀಚಿನ ಕೆಲ ದಿನಗಳಿಂದ ವಿರಾಟ್ ಕೊಹ್ಲಿ ನೀಡುತ್ತಿರುವ ಪ್ರದರ್ಶನ ಸೌರವ್ ಗಂಗೂಲಿಯವರ ಪ್ರದರ್ಶನದ ರೀತಿಯೇ ಇದೆ ಎಂದು ಟೀಕಿಸಿದ್ದಾರೆ. ಈ ಹಿಂದೆ ಸೌರವ್ ಗಂಗೂಲಿ ಕೂಡ ಉತ್ತಮ ಬ್ಯಾಟಿಂಗ್ ಮಾಡದೇ ಟೀಮ್ ಇಂಡಿಯಾದ ನಾಯಕರಾಗಿದ್ದರು, ಇದೀಗ ಅದೇ ರೀತಿ ವಿರಾಟ್ ಕೊಹ್ಲಿ ಕೂಡ ತಯಾರಾಗುತ್ತಿದ್ದಾರೆ ಎಂಬರ್ಥದಲ್ಲಿ ಈ ನೆಟ್ಟಿಗ ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ ಇನ್ನೂ ಹಲವಾರು ಮಿಮ್ಸ್ ಮುಖಾಂತರ ನೆಟ್ಟಿಗರು ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದ ಕುರಿತು ಟೀಕೆಗಳನ್ನು ವ್ಯಕ್ತಪಡಿಸಿದ್ದರೆ, ವಿರಾಟ್ ಕೊಹ್ಲಿ ಅಭಿಮಾನಿಗಳು ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ತಮ್ಮ ನೆಚ್ಚಿನ ಆಟಗಾರನನ್ನು ಕಂಡು ಬೇಸರಕ್ಕೊಳಗಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications