'ದೇಶ ಮೊದಲು, ಮುಂಬೈ ನಂತರ'; ವಿನೋದ್ ಕಾಂಬ್ಳಿ ಟ್ವೀಟ್ ವಿರುದ್ಧ ಕಿಡಿಕಾರಿದ ನೆಟ್ಟಿಗರು!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿವೆ. ಈ ಮೂರು ಪಂದ್ಯಗಳ ಪೈಕಿ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು, ನಂತರ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 151 ರನ್‌ಗಳ ಗೆಲುವನ್ನು ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿತ್ತು ಹಾಗೂ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಇಂಗ್ಲೆಂಡ್ ಭಾರತದ ವಿರುದ್ಧ 76 ರನ್‌ಗಳ ಸರಣಿ ಗೆಲುವನ್ನು ಸಾಧಿಸಿತು. ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ 3 ಪಂದ್ಯಗಳ ನಂತರ 1-1 ಸಮಬಲವನ್ನು ಎರಡೂ ತಂಡಗಳು ಸಾಧಿಸಿದ್ದು ಇದೀಗ ಎಲ್ಲರ ಚಿತ್ತ ಸೆಪ್ಟೆಂಬರ್ 2 ರಿಂದ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದತ್ತ ಇದೆ.
ಇನ್ನು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ವಿಫಲರಾದರು. ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್‌ಗಳಿಗೆ ಆಲ್ ಔಟ್ ಆದ ಟೀಮ್ ಇಂಡಿಯಾ ಆಟಗಾರರು ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡರಾದರೂ ನಾಲ್ಕನೇ ದಿನದಲ್ಲಿ ಮತ್ತೆ ಕಳಪೆ ಪ್ರದರ್ಶನವನ್ನು ಮುಂದುವರೆಸಿದರು, ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಸಾಲುಸಾಲಾಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ಹೀಗೆ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಫಲವಾಗಿರುವ ಟೀಮ್ ಇಂಡಿಯಾಗೆ ಆಟಗಾರರ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರು ಯಾವ ಆಟಗಾರರನ್ನು ತಂಡದಿಂದ ಕೈಬಿಡಬೇಕು ಮತ್ತು ಯಾವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂಬುದರ ಕುರಿತು ಚರ್ಚೆಗಳನ್ನು ನಡೆಸಿದ್ದಾರೆ. ಈ ಕುರಿತು ಇದೀಗ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡ ಟ್ವೀಟ್ ಮಾಡುವ ಮುಖಾಂತರ ಬೇಡವಾದ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಅಷ್ಟಕ್ಕೂ ತಂಡದ ಬದಲಾವಣೆಯ ಕುರಿತು ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮಾಡಿರುವ ವಿವಾದಾತ್ಮಕ ಟ್ವೀಟ್ ಆದರೂ ಏನು ಎಂಬುದರ ಕುರಿತ ಮಾಹಿತಿ ಮುಂದೆ ಇದೆ ಓದಿ..

ಕಾಂಬ್ಳಿ ಮಾಡಿರುವ ವಿವಾದಾತ್ಮಕ ಟ್ವೀಟ್ ಹೀಗಿದೆ
'ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಅಜಿಂಕ್ಯ ರಹಾನೆಗೆ ವಿಶ್ರಾಂತಿ ನೀಡುವ ಸಮಯವಿದು ಹಾಗೂ ಅಜಿಂಕ್ಯ ರಹಾನೆ ಬದಲು ಸೂರ್ಯಕುಮಾರ್ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕು. ನಾಲ್ಕು ವೇಗದ ಬೌಲರ್‌ಗಳನ್ನು ಆಡಿಸುವ ಬದಲು ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡುವುದು ಒಳಿತು. ನಾನೇನಾದರೂ ನಾಯಕನಾಗಿದ್ದರೆ ಕಳಪೆ ಪ್ರದರ್ಶನ ನೀಡುತ್ತಿರುವ ಮಧ್ಯಮ ಕ್ರಮಾಂಕದ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಬಳಿಯೂ ಹೋಗಿ ವೈಯಕ್ತಿಕವಾಗಿ ಮಾತನಾಡಿ ಉತ್ಸಾಹವನ್ನು ತುಂಬುತ್ತಿದ್ದೆ' ಎಂದು ವಿನೋದ್ ಕಾಂಬ್ಳಿ ಟ್ವೀಟ್ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದೇಶದ ವಿಷಯ ಬಂದಾಗ ರಾಜ್ಯದ ಪರ ನಿಲ್ಲುವುದನ್ನು ಬಿಡಿ ಎಂದ ನೆಟ್ಟಿಗ
ಅಂತಾರಾಷ್ಟ್ರೀಯ ತಂಡದಲ್ಲಿ ಉತ್ತಮ ಆಟಗಾರರಿಗೆ ಸ್ಥಾನ ಸಿಗಬೇಕು ನಿಜ ಆದರೆ ರಾಜ್ಯವನ್ನು ತಲೆಯಲ್ಲಿಟ್ಟುಕೊಂಡು ನಮ್ಮ ರಾಜ್ಯದ ಆಟಗಾರರಿಗೆ ಅವಕಾಶ ನೀಡಬೇಕು ಎನ್ನುವುದು ತಪ್ಪು ಎಂದು ವಿನೋದ್ ಕಾಂಬ್ಳಿ ಟ್ವೀಟ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. 'ಅಜಿಂಕ್ಯ ರಹಾನೆಯನ್ನು ತಂಡದಿಂದ ಹೊರಗಿಟ್ಟು ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ನೀಡಿ ಎನ್ನುವುದು ತಪ್ಪು, ಸೂರ್ಯಕುಮಾರ್ ಯಾದವ್ ಅವರಿಗಿಂತ ಮಯಾಂಕ್ ಅಗರ್ವಾಲ್ ಮತ್ತು ಹನುಮ ವಿಹಾರಿ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವುಳ್ಳ ಆಟಗಾರರಾಗಿದ್ದಾರೆ. ದೇಶದ ವಿಷಯ ಬಂದಾಗ ನಿಮ್ಮ ರಾಜ್ಯದ ಆಟಗಾರರನ್ನು ಸಮರ್ಥಿಸಿಕೊಳ್ಳುವುದನ್ನು ಬಿಡಿ. ಮೊದಲು ಭಾರತ ನಂತರ ಮುಂಬೈ ಮಿಸ್ಟರ್ ಕಾಂಬ್ಳಿ' ಎಂದು ನೆಟ್ಟಿಗನೊಬ್ಬ ಕಾಂಬ್ಳಿ ವಿರುದ್ಧ ಕಿಡಿಕಾರಿದ್ದಾನೆ.

ರಹಾನೆಯನ್ನು ತಂಡದಿಂದ ಕೈ ಬಿಡುವುದು ಸುಲಭವಲ್ಲ
ರಹಾನೆಯನ್ನು ತಂಡದಿಂದ ಕೈಬಿಡಬೇಕು ಎಂದು ಟ್ವೀಟ್ ಮಾಡಿರುವ ಕಾಂಬ್ಳಿ ವಿರುದ್ಧ ಮತ್ತೊಬ್ಬ ನೆಟ್ಟಿಗ ಕಿಡಿಕಾರಿದ್ದು 'ಅಜಿಂಕ್ಯ ರಹಾನೆ ಕಳೆದ ಕೆಲವು ಇನ್ನಿಂಗ್ಸ್‌ನಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಗುವುದಿಲ್ಲ, ರಹಾನೆ ಮಧ್ಯಮ ಕ್ರಮಾಂಕದಲ್ಲಿ ಬೇಕಾಗುವ ಅತ್ಯಂತ ಪ್ರಮುಖ ಆಟಗಾರ' ಎಂದು ಟ್ವೀಟ್ ಮಾಡಿದ್ದಾನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications