ಗುರುವಾರ, ಜನವರಿ 25ರಂದು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 1ನೇ ದಿನದಂದು ಆತಿಥೇಯ ಭಾರತ ತಂಡವು ಪ್ರವಾಸಿ ಇಂಗ್ಲೆಂಡ್ ತಂಡವನ್ನು 246 ರನ್‌ಗಳಿಗೆ ಆಲೌಟ್ ಮಾಡಿತು.
ಪ್ರತ್ಯುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 23 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಕಲೆಹಾಕಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ಟೀಮ್ ಇಂಡಿಯಾ ಇನ್ನೂ 127 ರನ್ ಗಳಿಸಬೇಕಿದೆ.

ಇದೇ ವೇಳೆ ಭಾರತ ತಂಡದ ಅತ್ಯಂತ ಪ್ರೀತಿಯ ಕ್ರಿಕೆಟಿಗರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾಗ ಆಟದ ಮಧ್ಯದಲ್ಲಿ ಪ್ರೇಕ್ಷಕನೊಬ್ಬ ಮೈದಾನಕ್ಕೆ ನುಗ್ಗಿದ.
ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯುವಾಗ ರೋಹಿತ್ ಶರ್ಮಾ ಅವರು ಅನಿರೀಕ್ಷಿತವಾಗಿ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದರು. ಇದು ಕೆಲ ಕಾಲ ಆತಂಕದ ವಾತಾವರಣ ನಿರ್ಮಿಸಿತ್ತು.
ಪಿಚ್‌ನ ಮಧ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೆರ್ಸಿ ಧರಿಸಿದ್ದ ಅಭಿಮಾನಿಯೊಬ್ಬರು, ರೋಹಿತ್ ಶರ್ಮಾ ಅವರನ್ನು ಭೇಟಿಯಾಗಲು ಬಂದಾಗ ಭಾರತ ತಂಡದ ನಾಯಕ ಮೊದಲು ಆಘಾತಕ್ಕೊಳಗಾದರು. ಬಳಿಕ ರೋಹಿತ್ ಶರ್ಮಾ ಅವರ ಪಾದಗಳನ್ನು ಮುಟ್ಟಿ ಕೈಕುಲುಕುತ್ತಿರುವುದು ಕಂಡುಬಂತು.

ಪಿಚ್ ಆಕ್ರಮಣಕಾರನನ್ನು ಮೈದಾನದಿಂದ ಹೊರಗೆ ಕರೆದೊಯ್ಯುವ ಸಲುವಾಗಿ ಭದ್ರತಾ ಸಿಬ್ಬಂದಿ ಪಿಚ್‌ಗೆ ಧಾವಿಸುವ ಮೊದಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಭಿಮಾನಿಯನ್ನು ನಯವಾಗಿ ಮಾತನಾಡಿಸಿದರು.
ಇನ್ನು ರೋಹಿತ್ ಶರ್ಮಾ ಬ್ಯಾಟ್ ಮೂಲಕ ಕೆಲವು ರನ್‌ಗಳ ಕೊಡುಗೆ ನೀಡಿದರು. 26 ಎಸೆತಗಳಲ್ಲಿ 3 ಬೌಂಡರಿ ಮೂಲಕ 24 ರನ್ ಗಳಿಸಿದ ನಂತರ, 27ನೇ ಎಸೆತದಲ್ಲಿ ಜಾಕ್ ಲೀಚ್ ಬೌಲಿಂಗ್‌ನಲ್ಲಿ ಬೆನ್ ಸ್ಟೋಕ್ಸ್‌ಗೆ ಕ್ಯಾಚ್ ನೀಡಿ ಔಟಾದರು.
ರೋಹಿತ್ ಶರ್ಮಾ ಔಟಾಗಲು ಮೊದಲು ಪಿಚ್‌ನಲ್ಲಿ ಅನಿರೀಕ್ಷಿತವಾಗಿ ಅಭಿಮಾನಿಯೊಂದಿಗೆ ಸ್ವಲ್ಪ ಸಮಯ ಕಳೆದರು. ಪ್ರೇಕ್ಷಕರೊಬ್ಬರು ಮೈದಾನದ ಭದ್ರತಾ ಸಿಬ್ಬಂದಿಯನ್ನು ವಂಚಿಸಿ, ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದರು.
ಇನ್ನು ಇಂಗ್ಲೆಂಡ್‌ನ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ (35) ಮತ್ತು ಜಾಕ್ ಕ್ರಾಲಿ (20) ಉತ್ತಮ ಆರಂಭ ನೀಡಿದರು. ಜಾಕ್ ಕ್ರಾಲಿ ಔಟಾದ ನಂತರ ಬಂದ ಒಲ್ಲಿ ಪೋಪ್ ಕೇವಲ ಒಂದು ರನ್ ಗಳಿಸಿದರು. ನಂತರ ಬೆನ್ ಡಕೆಟ್ ಕೂಡ ವಿಕೆಟ್ ಒಪ್ಪಿಸಿದರು.
ಈ ವೇಳೆ ಕ್ರೀಸ್‌ಗೆ ಬಂದ ಜೋ ರೂಟ್ 60 ಎಸೆತಗಳಲ್ಲಿ ತಾಳ್ಮೆಯ 29 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಜಾನಿ ಬೈರ್‌ಸ್ಟೋವ್ 58 ಎಸೆತಗಳಲ್ಲಿ 37 ರನ್ ಕಲೆಹಾಕಿದರು. ನಾಯಕ ಬೆನ್ ಸ್ಟೋಕ್ಸ್ 88 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 70 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿದರು. ಉಳಿದಂತೆ ಬೆನ್ ಫೋಕ್ಸ್ 4 ರನ್, ರೆಹಾನ್ ಅಹ್ಮದ್ 13 ರನ್, ಟಾಮ್ ಹಾರ್ಟ್ಲಿ 23 ರನ್ ಮತ್ತು ಮಾರ್ಕ್ ವುಡ್ 11 ರನ್ ಗಳಿಸಿದರು.
ಭಾರತದ ಪರ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಕಬಳಿಸಿದರು.
ಇನ್ನು ಭಾರತ ತಂಡದ ಮೊದಲ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 80 ರನ್‌ಗಳ ಜೊತೆಯಾಟ ನೀಡಿತು.
ರೋಹಿತ್ ಶರ್ಮಾ 27 ಎಸೆತಗಳಲ್ಲಿ 3 ಬೌಂಡರಿ ಸಮೇತ 24 ರನ್ ಗಳಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 70 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶುಭ್ಮನ್ ಗಿಲ್ 14 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.