IND vs ENG: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡ ಸೇರಿದ ವಿರಾಟ್, ಇಬ್ಬರು ಕನ್ನಡಿಗರಿಗೆ ಸ್ಥಾನ
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದೆ. ಮುಂಬರುವ ಜುಲೈ 14 ರಿಂದ 19 ರವರೆಗೆ ನಡೆಯಲಿರುವ ಮೂರು ಪಂದ್ಯಗಳ ಬಹುನಿರೀಕ್ಷಿತ ಏಕದಿನ ಸರಣಿಗೆ ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದರೆ, ಇನ್ನು ಕೆಲವು ಸ್ಟಾರ್ ಆಟಗಾರರನ್ನು ಕೈಬಿಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಈ ಹೈ-ವೋಲ್ಟೇಜ್ ಸರಣಿಯಲ್ಲಿ ಯುವ ಬ್ಯಾಟರ್ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಅವರಿಗೆ ಇಂಗ್ಲೆಂಡ್ ಪ್ರವಾಸದ ಟಿಕೆಟ್ ಸಿಕ್ಕಿಲ್ಲ. ಅನುಭವಿ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ತಂಡಕ್ಕೆ ಮರಳಿ ಬಂದಿರುವ ವಿರಾಟ್ ಕೊಹ್ಲಿ ಅವರ ಮೇಲೆ ಆಯ್ಕೆ ಸಮಿತಿ ಹೆಚ್ಚಿನ ನಂಬಿಕೆ ಇಟ್ಟಿದೆ.

ವಿರಾಟ್ ಕೊಹ್ಲಿ ಏಕದಿನ ತಂಡಕ್ಕೆ ಮರಳಿದ್ದಾರೆ. ಆದರೆ, ತಂಡದಲ್ಲಿದ್ದರೂ ಅವರ ಆಟದ ಆಯ್ಕೆ ಸಂಪೂರ್ಣವಾಗಿ ಫಿಟ್‌ನೆಸ್ ಟೆಸ್ಟ್ ಮೇಲೆ ಆಧಾರಿತವಾಗಿದೆ. ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸದಲ್ಲಿ ಇವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಲಭಿಸುತ್ತದೆ. ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಗುರ್ನೂರ್ ಬ್ರಾರ್‌ಗೆ ಮಣೆ
ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದರಿಂದ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಅವರೊಂದಿಗೆ, ಹಿರಿಯ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಮತ್ತು ಪ್ರಮುಖ ವೇಗಿ ಜಸ್ಪ್ರಿತ್ ಬುಮ್ರಾ ತಂಡಕ್ಕೆ ಮರಳಿರುವುದು ಬಲ ತಂದಿದೆ. ಇವರಿಬ್ಬರಿಗೂ ಅಫ್ಘಾನಿಸ್ತಾನ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ದೇಶೀಯ ಕ್ರಿಕೆಟ್ ಹಾಗೂ ಚೊಚ್ಚಲ ಅಂತರರಾಷ್ಟ್ರೀಯ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯುವ ವೇಗಿ ಗುರ್ನೂರ್ ಬ್ರಾರ್ ಅವರಿಗೆ ಬಿಸಿಸಿಐ ಮಣೆ ಹಾಕಿದೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಗುರ್ನೂರ್ ಬ್ರಾರ್ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಸಂಜುಗೆ ಸ್ಥಾನವಿಲ್ಲ
ಕೇರಳದ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆಯ್ಕೆಗಾರರು ಇಶಾನ್ ಕಿಶನ್ ಮತ್ತು ಕೆ ಎಲ್ ರಾಹುಲ್ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದು, ಸ್ಯಾಮ್ಸನ್ ಅವರ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದು ಕಷ್ಟವಾಗಿದೆ.
ಕರ್ನಾಟಕದ ಇಬ್ಬರು ಆಟಗಾರರಿಗೆ ಅವಕಾಶ
ಕರ್ನಾಟಕದ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆಎಲ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಇನ್ನು ಪ್ರಸಿದ್ಧ್ ಕೃಷ್ಣ ಅಫ್ಘಾನಿಸ್ತಾನ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದ್ದು, ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಏಕದಿನ ತಂಡ: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ. ಎಲ್. ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್ ಮತ್ತು ಗುರ್ನೂರ್ ಬ್ರಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

