ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ 28 ರನ್‌ಗಳಿಂದ ಗೆದ್ದುಕೊಂಡಿತ್ತು. ಬಳಿಕ ಭಾರತ ತಂಡ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿ ಎರಡನೇ ಟೆಸ್ಟ್ ಪಂದ್ಯವನ್ನು 106 ರನ್‌ಗಳಿಂದ ಗೆದ್ದುಕೊಂಡಿತು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡಿದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಂದು ರಾಜ್‌ಕೋಟ್ ಮೈದಾನದಲ್ಲಿ ನಡೆಯಲಿದೆ. ಇದೀಗ ಮೂರನೇ ಟೆಸ್ಟ್‌ಗೂ ಮುನ್ನವೇ ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಜೋ ರೂಟ್ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಪ್ರಸ್ತುತ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಲ್ಲಿಯವರೆಗೆ ಬ್ಯಾಟಿಂಗ್‌ನಲ್ಲಿ ವಿಫಲವಾಗಿರುವ ರೂಟ್ ನೀಡಿರುವ ಹೇಳಿಕೆ ಎಲ್ಲರ ಚಿತ್ತ ಕದ್ದಿದೆ. ಮೂರನೇ ಟೆಸ್ಟ್‌ಗೂ ಮುನ್ನ ರೂಟ್ ನಾವು ಇನ್ನು ಮುಂದೆ ಟೀಮ್ ಮಿಟಿಂಗ್ ಮಾಡುವುದಿಲ್ಲ ಎಂದು ಜಿಯೋ ಸಿನಿಮಾಗೆ ತಿಳಿಸಿದರು.
ತಂಡದಲ್ಲಿ ಆಟಗಾರರ ಚಿತ್ತವನ್ನು ಕದಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಹೀಗಾಗಿ ಆಟಗಾರರ ಮೇಲೆ ಒತ್ತಡವನ್ನು ಹೇರಲು ನಾವು ಬಯಸುವುದಿಲ್ಲ. ಅವರು ಪರಸ್ಪರ ಸಮಯ ಕಳೆಯುವುದನ್ನು ಆನಂದಿಸುತ್ತಾರೆ ಮತ್ತು ಚರ್ಚಿಸಲು ಇಷ್ಟಪಡುತ್ತಾರೆ ಎಂದಿದ್ದಾರೆ.
ಇನ್ನು ಮುಂದೆ ನಾವು 'ಮೀಟಿಂಗ್ ರೂಂ'ನಲ್ಲಿ ಕುಳಿತುಕೊಳ್ಳಬೇಕಾಗಿಲ್ಲ ಎಂದು ಮಾಜಿ ನಾಯಕ ಜೋ ರೂಟ್ ಹೇಳಿದ್ದಾರೆ. ಊಟದ ಮೇಜಿನ ಬಳಿ ಅಥವಾ ಕಾಫಿ ಕುಡಿಯುವಾಗ ನಿಮ್ಮ ತಂತ್ರವನ್ನು ನೀವು ಬಹಿರಂಗ ಪಡಿಸಬಹುದು. ಅದಕ್ಕೆ ನಿರ್ಧಿಷ್ಟ ಸ್ಥಳದ ಅವಶ್ಯಕತೆ ಇಲ್ಲ ಎಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಫಲಿತಾಂಶ ಏನೇ ಬಂದರೂ ನಮ್ಮ ತಂಡ ತನಗೆ ಗೊತ್ತಿರುವ ಶೈಲಿಯಲ್ಲಿ ಆಟ ಮುಂದುವರಿಸಲಿದೆ ಎಂದು ಜೋ ರೂಟ್ ಹೇಳಿದ್ದಾರೆ. ಇದು ಸ್ವಲ್ಪ ಸಮಯದವರೆಗೆ ನಮಗೆ ಯಶಸ್ಸನ್ನು ತಂದಿದೆ. ಇದರೊಂದಿಗೆ ನಾವು ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ನಾವು ಹಿಂದೆಯೂ ಈ ರೀತಿಯ ತಂತ್ರವನ್ನು ಮಾಡಿಯೇ ಸೈ ಎನಿಸಿಕೊಂಡಿದ್ದೇವೆ. ಕಳೆದ ಬಾರಿ ಇಂಗ್ಲೆಂಡ್‌ನಲ್ಲಿ ಭಾರತವನ್ನು ಎದುರಿಸಿದ್ದೆವು. ಆ ಟೆಸ್ಟ್ ಪಂದ್ಯದಲ್ಲೂ ನಾವು ದೊಡ್ಡ ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದೇವು. ಆದರೆ ನಾವು ಧೃತಿ ಗೆಡದೆ ಭರ್ಜರಿ ಆಟದ ಪ್ರದರ್ಶನ ನೀಡಿದೆವು ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ಭಾರತ ತಂಡ ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಯಶಸ್ವಿ ಜೈಸ್ವಾಲ್ ತಂಡದ ಪರ 209 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಇವರಿಂದಾಗಿಯೇ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 396 ರನ್ ಗಳಿಸಲು ಸಾಧ್ಯವಾಯಿತು. ಇದಾದ ಬಳಿಕ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ಗೆ ಉತ್ತರ ನೀಡಲಾಗದೆ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಔಟಾದರು.
ಮೊದಲ ಇನಿಂಗ್ಸ್‌ನಲ್ಲಿ ಬುಮ್ರಾ 6 ವಿಕೆಟ್‌ಗಳನ್ನು ಕಬಳಿಸಿದರು. ಇವರಿಂದಾಗಿಯೇ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ಭಾರತದ ಪರವಾಗಿ ಶುಭಮನ್ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ 104 ರನ್ ಗಳಿಸಿದರು. ಈ ಪಂದ್ಯದಲ್ಲಿ ಬುಮ್ರಾ ಒಟ್ಟು 9 ವಿಕೆಟ್ ಪಡೆದರು. ಈ ಕಾರಣಕ್ಕಾಗಿ ಅವರು 'ಪಂದ್ಯ ಶ್ರೇಷ್ಠ ಆಟಗಾರ' ಪ್ರಶಸ್ತಿ ಪಡೆದರು.