ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಸರಣಿಯನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಆಸೆ ಉಭಯ ತಂಡಗಳದ್ದಾಗಿದೆ. ಈಗಾಗಲೇ ಈ ಸರಣಿಗೆ ಎರಡೂ ತಂಡಗಳನ್ನು ಪ್ರಕಟಿಸಲಾಗಿದೆ. ಟೆಸ್ಟ್ ಪಂದ್ಯ ರೋಚಕತೆ ಮನೆ ಮಾಡಿದೆ.
ಟೀಮ್ ಇಂಡಿಯಾ ತನ್ನ ಉತ್ತಮ ತಂಡವನ್ನು ಪ್ರಕಟಿಸಿದೆ. ಭಾರತ ತನ್ನ ಎಲ್ಲ ವಿಭಾಗಗಳನ್ನು ಸ್ಟ್ರಾಂಗ್ ಗೊಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ತವರಿನಲ್ಲಿ ಸರಣಿ ನಡೆಯುತ್ತಿರುವುದರಿಂದ ಸ್ಪಿನ್ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಇಷ್ಟಾಗ್ಯೂ ಭಾರತದ ಬ್ಯಾಟಿಂಗ್ ಲೈನ್ ಅಪ್‌ನಲ್ಲಿ ಕೆಲವು ಸ್ಪಾಟ್‌ಗಳು ಇನ್ನು ಪ್ರಶ್ನೆಯಾಗಿಯೇ ಉಳಿದಿವೆ ಅದರಲ್ಲಿ ಬಹುಮುಖ್ಯವಾಗಿ ಕಾಣಿಸಿಕೊಳ್ಳುವುದು ಐದನೇ ಕ್ರಮಾಂಕ..

ಮಿಡ್ಲ್ ಆರ್ಡರ್‌ನಲ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಎತ್ತಿ ಹಿಡಿಯುವ ಸ್ಥಾನ. ಈ ಸ್ಥಾನಕ್ಕೆ ಅಧಿಪತಿ ಯಾರು ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಗಬೇಕಿದೆ. ಏಕಂದರೆ ಈ ಸ್ಥಾನದಲ್ಲಿ ಆಡುವ ಇಬ್ಬರು ನುರಿತ ಆಟಗಾರರು ಈಗ ತಂಡದಲ್ಲಿ ಸ್ಥಾನ ಪಡೆದಿದ್ದು, ಯಾರನ್ನು ಐದನೇ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಚಿಂತೆ ತಂಡವನ್ನು ಕಾಡುತ್ತಿದೆ.
5ನೇ ಕ್ರಮಾಂಕದಲ್ಲಿ ಯಾವ ಬ್ಯಾಟ್ಸ್‌ಮನ್‌ಗೆ ಅವಕಾಶ ಸಿಗಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸ್ಪರ್ಧಿಗಳಾಗಿದ್ದು, ಟೀಮ್ ಮ್ಯಾನೇಜ್ ಮೆಂಟ್ ಯಾರ ಮೇಲೆ ವಿಶ್ವಾಸ ತೋರಿಸಲಿದೆ ಎಂಬುದೆ ಎಲ್ಲರ ಚಿತ್ತ ಕದ್ದಿದೆ. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಶ್ರೇಯಸ್ ಅಯ್ಯರ್‌ಗಿಂತ ಕೆಎಲ್ ರಾಹುಲ್‌ಗೆ ಆದ್ಯತೆ ಸಿಗುತ್ತದೆಯೇ? ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಆಡಿದ್ದರು.

ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಆಡಿದರೆ ಶ್ರೇಯಸ್ ಅಯ್ಯರ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇನ್ನು ಕೆಎಲ್ ರಾಹುಲ್ ಬ್ಯಾಟ್ಸ್ ಮನ್ ಆಗಿ ಆಡಿದರೂ ಶ್ರೇಯಸ್ ಅಯ್ಯರ್ ಗೆ ಸ್ಥಾನ ಸಿಗುತ್ತದೆ ಎಂದು ಹೇಳುವುದು ಕಷ್ಟ. ವಾಸ್ತವವಾಗಿ, ಕೆಎಸ್ ಭರತ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಯಾರಿಗೆ ಅವಕಾಶ ಸಿಗಬಹುದು ಎಂಬುದು ರೋಚಕತೆ ಹೆಚ್ಚಿಸಿದೆ. ಭಾರತದ ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಕೆಎಲ್ ರಾಹುಲ್ ಗೆ ವಿಕೆಟ್ ಕೀಪಿಂಗ್ ಮಾಡುವುದು ಸುಲಭವಲ್ಲ. ಅದರಲ್ಲೂ ರವೀಂದ್ರ ಜಡೇಜಾ ಹಾಗೂ ರವಿ ಅಶ್ವಿನ್ ಎಸೆತಗಳಲ್ಲಿ ವಿಕೆಟ್ ಕೀಪಿಂಗ್ ಮಾಡುವುದು ಕೆಎಲ್ ರಾಹುಲ್ ಗೆ ದೊಡ್ಡ ಸವಾಲು. ಆದ್ದರಿಂದ ಕೆಎಸ್ ಭರತ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬಹುದು ಎಂದು ನಂಬಲಾಗಿದೆ. ಹೀಗೆ ಆದಲ್ಲಿ ಶ್ರೇಯಸ್ ಅಯ್ಯರ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಕಷ್ಟ.
ಅಂಕಿಅಂಶಗಳ ಪ್ರಕಾರ ಶ್ರೇಯಸ್ ಅಯ್ಯರ್ ಭಾರತದ ನೆಲದಲ್ಲಿ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ 7 ಟೆಸ್ಟ್ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ 39.09 ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿ 1 ಶತಕ ದಾಖಲಾಗಿದೆ. ಇದಲ್ಲದೇ 3 ಬಾರಿ ಐವತ್ತು ರನ್‌ಗಳ ಗಡಿ ದಾಟಿದ್ದಾರೆ. ಅದೇ ಸಮಯದಲ್ಲಿ, ಕೆಎಲ್ ರಾಹುಲ್ ಭಾರತದ ನೆಲದಲ್ಲಿ 16 ಟೆಸ್ಟ್‌ಗಳನ್ನು ಆಡಿದ್ದಾರೆ, ಇದರಲ್ಲಿ ಅವರು 40.13 ಸರಾಸರಿಯಲ್ಲಿ 923 ರನ್ ಗಳಿಸಿದ್ದಾರೆ. 1 ಶತಕವನ್ನು ಹೊರತುಪಡಿಸಿ, ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ 8 ಬಾರಿ ಐವತ್ತು ರನ್ ಗಡಿ ದಾಟಿದ್ದಾರೆ.