ಭಾನುವಾರ, ಫೆಬ್ರವರಿ 18ರಂದು ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಭಾರತ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ ಬಾರಿಸಿ ಸಂಭ್ರಮಿಸಿದರು.
ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಈಗಾಗಲೇ 500 ಕ್ಕೂ ಅಧಿಕ ರನ್‌ಗಳ ಮುನ್ನಡೆ ಸಾಧಿಸಿದ್ದು, ಇಂಗ್ಲೆಂಡ್ ತಂಡಕ್ಕೆ ಕೊನೆಯ ಇನ್ನಿಂಗ್ಸ್‌ನಲ್ಲಿ ಬೃಹತ್ ಗುರಿಯನ್ನು ನೀಡಲಿದೆ.

ಭಾರತ ತಂಡದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಮೂರನೇ ದಿನದಂದು 104 ರನ್‌ಗಳ ಭರ್ಜರಿ ಶತಕ ಬಾರಿಸಿದ ನಂತರ, ಸೊಂಟ ನೋವಿನಿಂದ ರಿಟೈಡ್ ಹರ್ಟ್ ಆಗಿ ಮೈದಾನದಿಂದ ಹೊರನಡೆದರು. ನಾಲ್ಕನೇ ದಿನದಂದು ಶುಭ್ಮನ್ ಗಿಲ್ ಔಟಾದ ಬಳಿಕ ಕ್ರೀಸ್‌ಗೆ ಬಂದ ಯಶಸ್ವಿ ಜೈಸ್ವಾಲ್ ಶತಕವನ್ನು ದ್ವಿಶತಕಕ್ಕೆ ಪರಿವರ್ತಿಸಿದರು.
ಅಲ್ಲದೆ, ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಈ ಸರಣಿಯಲ್ಲಿ ಎರಡನೇ ದ್ವಿಶತಕ ಬಾರಿಸಿದರು. ಈ ಮೂಲಕ ಒಂದೇ ಟೆಸ್ಟ್ ಸರಣಿಯಲ್ಲಿ ದ್ವಿಶತಕ ಗಳಿಸಿದ ಮೂರನೇ ಭಾರತೀಯ ಆಟಗಾರ ಎನಿಸಿದರು.
ಈ ಮೊದಲು 1955ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿನೂ ಮಂಕಡ್ ಮತ್ತು 2017ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡು ದ್ವಿಶತಕ ಬಾರಿಸಿದ ಮೊದಲೆರಡು ಭಾರತೀಯ ಆಟಗಾರರಾಗಿದ್ದಾರೆ.
ತಮ್ಮ ಕಡಿಮೆ ವೃತ್ತಿಜೀವನದ ಎರಡನೇ ದ್ವಿಶತಕ ಗಳಿಸಿದ ಯಶಸ್ವಿ ಜೈಸ್ವಾಲ್ ವಿರುದ್ಧ ಬೃಹತ್ ರನ್ ದಾಖಲಿಸಲು ನೆರವಾದರು. 231 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಸಿಕ್ಸರ್ ಮೂಲಕ 200 ರನ್ ಪೂರ್ಣಗೊಳಿಸಿದರು.

ಇನ್ನು ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 98 ಓವರ್‌ಗಳಲ್ಲಿ 4 ವಿಕೆಟ್‌ಗೆ 430 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ 556 ರನ್‌ಗಳ ಬೃಹತ್ ಗುರಿ ನೀಡಿದೆ.
ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ 236 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 12 ಸಿಕ್ಸರ್‌ಗಳ ಸಮೇತ ಅಜೇಯ 214 ರನ್ ಬಾರಿಸಿದರು. ಇದೇ ವೇಳೆ ಸರ್ಫರಾಜ್ ಖಾನ್ 72 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ ಅಜೇಯ 68 ರನ್ ಗಳಿಸಿದರು.
ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಜೋಡಿ ಮುರಿಯದ ಐದನೇ ವಿಕೆಟ್‌ಗೆ 158 ಎಸೆತಗಳಲ್ಲಿ 172 ರನ್‌ಗಳ ಜೊತೆಯಾಟ ನಿರ್ಮಿಸಿದರು.
ವಿಶಾಖಪಟ್ಟಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 209 ರನ್ ಬಾರಿಸಿದ್ದರು. ಹಿಂದಿನ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಮೂರನೇ ಕಿರಿಯ ಭಾರತೀಯ ಬ್ಯಾಟರ್ ಆಗಿದ್ದರು. ಇದೀಗ ಯಶಸ್ವಿ ಜೈಸ್ವಾಲ್ 9 ದಿನಗಳ ವಿರಾಮದ ನಂತರ, ಪ್ರಾರಂಭವಾದ ನಿರ್ಣಾಯಕ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಸರಣಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ದ್ವಿಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಯಶಸ್ವಿ ಜೈಸ್ವಾಲ್ ಭಾನುವಾರ ಹೊಸ ಭಾರತೀಯ ದಾಖಲೆಯನ್ನು ನಿರ್ಮಿಸಿದರು.
ಯಶಸ್ವಿ ಜೈಸ್ವಾಲ್ - 2
ವಿರಾಟ್ ಕೊಹ್ಲಿ - 1
ಸುನಿಲ್ ಗವಾಸ್ಕರ್ - 1
ವಿನೋದ್ ಕಾಂಬ್ಳಿ - 1
ಗುಂಡಪ್ಪ ವಿಶ್ವನಾಥ್ - 1
ರಾಹುಲ್ ದ್ರಾವಿಡ್ - 1
ಚೇತೇಶ್ವರ ಪೂಜಾರ - 1
ಮನ್ಸೂರ್ ಅಲಿ ಖಾನ್ ಪಟೌಡಿ - 1
ಯಶಸ್ವಿ ಜೈಸ್ವಾಲ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಭಾರತೀಯ ದಾಖಲೆಯನ್ನು ಮುರಿದರು. ಮೂರನೇ ಟೆಸ್ಟ್ ಪಂದ್ಯದ 4ನೇ ದಿನದ ಎರಡನೇ ಸೆಷನ್‌ನಲ್ಲಿ ತಮ್ಮ ಸಿಕ್ಸರ್‌ಗಳ ಸಂಖ್ಯೆಯನ್ನು 12ಕ್ಕೆ ವಿಸ್ತರಿಸಿದರು. ಈ ಮೂಲಕ ಮಾಜಿ ಬ್ಯಾಟರ್ ನವಜೋತ್ ಸಿಂಗ್ ಸಿಧು ಅವರ 30 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.
ಯಶಸ್ವಿ ಜೈಸ್ವಾಲ್ - ಇಂಗ್ಲೆಂಡ್ ವಿರುದ್ಧ 12 ಸಿಕ್ಸರ್ - 2024
ನವಜೋತ್ ಸಿಂಗ್ ಸಿಧು - ಶ್ರೀಲಂಕಾ ವಿರುದ್ಧ 8 ಸಿಕ್ಸರ್ - 1994
ಮಯಾಂಕ್ ಅಗರ್ವಾಲ್ - ಬಾಂಗ್ಲಾದೇಶ ವಿರುದ್ಧ 8 ಸಿಕ್ಸರ್ - 2019