ಶನಿವಾರ, ಫೆಬ್ರವರಿ 24ರಂದು ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿದೆ.
ಇದೇ ವೇಳೆ ಭಾರತ ತಂಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ಕ್ಯಾಪ್‌ಗೆ ಮತ್ತೊಂದು ಸಾಧನೆಯನ್ನು ಗರಿಯನ್ನು ಸೇರಿಸಿಕೊಂಡರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಸರಣಿಯಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಐದನೇ ಭಾರತೀಯ ಆಟಗಾರನಾದರು.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ 600 ರನ್ ಪೂರ್ಣಗೊಳಿಸಿದರು. ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಕಾಂಪ್ಲೆಕ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 600 ರನ್‌ಗಳ ಗಡಿ ದಾಟಿದರು.
ಈವರೆಗೆ 4 ಟೆಸ್ಟ್ ಪಂದ್ಯಗಳಿಂದ 7 ಇನ್ನಿಂಗ್ಸ್‌ಗಳಲ್ಲಿ ಯಶಸ್ವಿ ಜೈಸ್ವಾಲ್ ಅವರು 2 ಶತಕ ಮತ್ತು 2 ಅರ್ಧಶತಕಗಳೊಂದಿಗೆ 78.32ರ ಸ್ಟ್ರೈಕ್ ರೇಟ್ ಮತ್ತು 103ರ ಸರಾಸರಿಯಲ್ಲಿ 618 ರನ್ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದ ಸಂದರ್ಭದಲ್ಲಿ ಜುಲೈ 2023ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಶೋಯೆಬ್ ಬಶೀರ್ ಅವರ ಬೌಲಿಂಗ್‌ನಲ್ಲಿ 55 ರನ್ ಗಳಿಸಲು ಏಕೈಕ ರನ್ ಗಳಿಸಿದ ನಂತರ, ಈ ಸರಣಿಯ ಏಳನೇ ಇನ್ನಿಂಗ್ಸ್‌ನಲ್ಲಿ ಬೃಹತ್ ಮೈಲಿಗಲ್ಲು ಸ್ಥಾಪಿಸಿದರು.

ಅದಾಗ್ಯೂ, ಯಶಸ್ವಿ ಜೈಸ್ವಾಲ್ 117 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಇಂಗ್ಲೆಂಡ್‌ನ ಸ್ಪಿನ್ನರ್ 22 ವರ್ಷದ ಶೋಯೆಬ್ ಬಶೀರ್ ಬೌಲಿಂಗ್‌ನಲ್ಲಿ ಔಟಾದರು.
ಉತ್ತರಪ್ರದೇಶದ ಭದೋಹಿ ಮೂಲದ ಯಶಸ್ವಿ ಜೈಸ್ವಾಲ್, ವಿಶಾಖಪಟ್ಟಣ ಮತ್ತು ರಾಜ್‌ಕೋಟ್‌ನ ಕ್ರಮವಾಗಿ ಎರಡು ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಎರಡು ದ್ವಿಶತಕ ಬಾರಿಸಿದರು. ಈ ಮೂಲಕ ಭಾರತ ತಂಡವು 2-1 ಮುನ್ನಡೆ ಸಾಧಿಸಲು ಸಹಾಯ ಮಾಡಿದರು.
ಇದೇ ವೇಳೆ ಯಶಸ್ವಿ ಜೈಸ್ವಾಲ್ ಅವರು ಲೆಜೆಂಡ್ ಕ್ರಿಕೆಟಿಗರಾದ ಡಾನ್ ಬ್ರಾಡ್ಮನ್, ಸರ್ ಗ್ಯಾರಿಪೀಲ್ಡ್ ಸೋಬರ್ಸ್, ಸುನಿಲ್ ಗವಾಸ್ಕರ್, ಗ್ರೇಮ್ ಸ್ಮಿತ್, ಜಾರ್ಜ್ ಹೆಡ್ಲಿ ಮತ್ತು ನೀಲ್ ಹಾರ್ವೆ ಅವರು 23ನೇ ವರ್ಷಕ್ಕೆ ಕಾಲಿಡುವ ಮೊದಲು ಟೆಸ್ಟ್ ಸರಣಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಗೆ ಸೇರಿಕೊಂಡರು.
ಡಾನ್ ಬ್ರಾಡ್ಮನ್ - 1930ರಲ್ಲಿ ಇಂಗ್ಲೆಂಡ್ ವಿರುದ್ಧ 974 ರನ್
ಗ್ಯಾರಿಪೀಲ್ಡ್ ಸೋಬರ್ಸ್ - 1957-58ರಲ್ಲಿ ಪಾಕಿಸ್ತಾನ ವಿರುದ್ಧ 824 ರನ್
ಸುನಿಲ್ ಗವಾಸ್ಕರ್ - 1970-71ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774 ರನ್
ಗ್ರೇಮ್ ಸ್ಮಿತ್ - 2003ರಲ್ಲಿ ಇಂಗ್ಲೆಂಡ್ ವಿರುದ್ಧ 714 ರನ್
ಜಾರ್ಜ್ ಹೆಡ್ಲಿ - 1929-30ರಲ್ಲಿ ಇಂಗ್ಲೆಂಡ್ ವಿರುದ್ಧ 703 ರನ್
ನೀಲ್ ಹಾರ್ವೆ - 1949-50ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 660 ರನ್
ಯಶಸ್ವಿ ಜೈಸ್ವಾಲ್ - 2024ರಲ್ಲಿ ಇಂಗ್ಲೆಂಡ್ ವಿರುದ್ಧ 618 ರನ್
ಎಡಗೈ ಬ್ಯಾಟರ್ ಜೈಸ್ವಾಲ್ ಅವರು ಭಾರತೀಯ ದಿಗ್ಗಜರಾದ ಸುನಿಲ್ ಗವಾಸ್ಕರ್ (1971, 1978), ವಿರಾಟ್ ಕೊಹ್ಲಿ (2014, 2016, 2017), ದಿಲೀಪ್ ಸರ್ದೇಸಾಯಿ (1971) ಮತ್ತು ರಾಹುಲ್ ದ್ರಾವಿಡ್ (2002) ನಂತರ ಟೆಸ್ಟ್ ಸರಣಿಯಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ 5ನೇ ಭಾರತೀಯ ಕ್ರಿಕೆಟಿಗನಾದರು.
1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸುನಿಲ್ ಗವಾಸ್ಕರ್ 4 ಶತಕ ಮತ್ತು 3 ಅರ್ಧ ಶತಕಗಳೊಂದಿಗೆ 774 ರನ್ ಗಳಿಸಿದ್ದರು. ಸುನಿಲ್ ಗವಾಸ್ಕರ್ ಅವರ 53 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲು ಯಶಸ್ವಿ ಜೈಸ್ವಾಲ್ ಕೇವಲ 156 ರನ್‌ಗಳ ಅಂತರದಲ್ಲಿದ್ದಾರೆ.
ರಾಂಚಿ ಟೆಸ್ಟ್ ಪಂದ್ಯದ 2ನೇ ದಿನದಂದು ಯಶಸ್ವಿ ಜೈಸ್ವಾಲ್ ಅವರು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ಬ್ಯಾಟರ್‌ನಿಂದ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ಗಳ ದಾಖಲೆಯನ್ನು ಮುರಿದರು. 2024ರಲ್ಲಿ ಆಡಿದ 5 ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ 23 ಸಿಕ್ಸರ್ ಬಾರಿಸಿದ್ದಾರೆ.
71.84ರ ಸರಾಸರಿಯಲ್ಲಿ 934 ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಲು 66 ರನ್‌ಗಳ ಹಿಂದೆ ಇದ್ದಾರೆ.