ಆಗಸ್ಟ್ 31ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಶುಭ ಸುದ್ದಿ ಸಿಗಲಿದೆ.
ಮುಂದಿನ ತಿಂಗಳು ಆರಂಭವಾಗುವ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 2022ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಸರಣಿಯ ನಂತರ ಮೊದಲ ಪ್ರದರ್ಶನ ಇದಾಗಿರಲಿದೆ.

ಕ್ರಿಕ್‌ಬಜ್ ಪ್ರಕಾರ, ವೇಗಿ ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್ ಸರಣಿಯನ್ನು ಎದುರು ನೋಡುತ್ತಿದ್ದರೆ, ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರ ಪುನರಾಗಮನ ಇನ್ನೂ ಅನುಮಾನವೆನಿಸಿದೆ.
ಬೆನ್ನುನೋವಿನಿಂದ ಐಪಿಎಲ್ 2023ರ ಸಂಪೂರ್ಣ ಋತುವನ್ನು ಕಳೆದುಕೊಂಡಿರುವ ಶ್ರೇಯಸ್ ಅಯ್ಯರ್ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಇನ್ನು ಕೆಎಲ್ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿರುವ ಜಿಮ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ.
ಬಿಸಿಸಿಐ ಆಯ್ಕೆ ಸಮಿತಿ ನೂತನ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಡುವಿನ ಸಭೆಯ ನಂತರ ಐರ್ಲೆಂಡ್ ಟಿ20 ಸರಣಿಗೆ ತಂಡದ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.

"ಹೊಸ ಆಯ್ಕೆ ಸಮಿತಿಯ ಅಧ್ಯಕ್ಷರು ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್‌ನಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಸೇರುವ ನಿರೀಕ್ಷೆಯಿದೆ. ಆಯ್ಕೆ ಸಮಿತಿಯ ಸದಸ್ಯ ಸಲೀಲ್ ಅಂಕೋಲಾ ಈಗಾಗಲೇ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾರೆ. ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ಭಾರತ ತಂಡ, ಸೋಮವಾರ ಎರಡನೇ ಟೆಸ್ಟ್‌ನ ಸ್ಥಳವಾದ ಟ್ರಿನಿಡಾಡ್‌ಗೆ ತೆರಳಲಿದೆ," ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
"ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಿದ್ದು, ಭಾರತದ ವೇಗದ ಬೌಲಿಂಗ್ ಮುಂಚೂಣಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಗತಿ ತೋರಿಸಿದ್ದಾರೆ. ಶ್ರೇಯಸ್ ಅಯ್ಯರ್ ಲಭ್ಯವಿರುವ ಯಾವುದೇ ಗ್ಯಾರಂಟಿ ಇಲ್ಲ. ಇನ್ನು ಕೆಎಲ್ ರಾಹುಲ್ ಐರ್ಲೆಂಡ್ ಸರಣಿ ಮಾತ್ರವಲ್ಲದೆ ಏಷ್ಯಾ ಕಪ್‌ನಲ್ಲಿಯೂ ಕಾಣಿಸಿಕೊಳ್ಳುವ ಅವಕಾಶವನ್ನು ಹೊಂದಿಲ್ಲ".
ರಾಹುಲ್ ಪ್ರಸ್ತುತ ಎನ್‌ಸಿಎನಲ್ಲಿ ಪುನರ್ವಸತಿಗೆ ಒಳಗಾಗುತ್ತಿದ್ದಾರೆ ಮತ್ತು ಇತ್ತೀಚಿನ ಮಾಹಿತಿಯ ಪ್ರಕಾರ, ಇನ್ನೂ ಬ್ಯಾಟಿಂಗ್ ಆರಂಭಿಸಬೇಕಿದೆ ಎಂದು ಕ್ರಿಕ್‌ಬಜ್ ವರದಿಯಲ್ಲಿ ತಿಳಿಸಲಾಗಿದೆ.
ಐರ್ಲೆಂಡ್‌ನಲ್ಲಿ ಮೂರು ಟಿ20 ಪಂದ್ಯಗಳು ಆಗಸ್ಟ್ 18, 20 ಮತ್ತು 23ರಂದು ಡಬ್ಲಿನ್‌ನಲ್ಲಿ ನಡೆಯಲಿವೆ. ಅನಂತರ 2023ರ ಏಷ್ಯಾ ಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಇದೇ ವೇಳೆ 2023ರ ಏಷ್ಯಾ ಕಪ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕ್ರಿಕ್‌ಬಜ್ ವರದಿ ಹೇಳಿದೆ. ಈಗಾಗಲೇ ವಿಳಂಬವಾಗಿರುವ ಅಂತಿಮ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಈ ಹಿಂದೆ ನಿರ್ಧರಿಸಿದಂತೆ ಶ್ರೀಲಂಕಾ ಒಂಬತ್ತು ಪಂದ್ಯಗಳನ್ನು ಆಯೋಜಿಸುತ್ತದೆ ಮತ್ತು ಪಂದ್ಯಗಳನ್ನು ಕ್ಯಾಂಡಿ ಮತ್ತು ದಂಬುಲ್ಲಾದಲ್ಲಿ ಆಡುವ ನಿರೀಕ್ಷೆಯಿದೆ. ಇನ್ನು ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಆಯೋಜಿಸಲಿದ್ದು, ಲಾಹೋರ್ ಆಡುವ ಸ್ಥಳವಾಗಿದೆ.
ಹೈಬ್ರಿಡ್ ಮಾದರಿಯ ಪ್ರಕಾರ, 2023ರ ಏಷ್ಯಾ ಕಪ್ ಎರಡು ದೇಶಗಳಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಪಾಲ್ಗೊಳ್ಳಲಿವೆ.