ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಐರ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಸ್ಮೃತಿ ಮಂಧಾನ ಇತಿಹಾಸ ನಿರ್ಮಿಸಿದ್ದಾರೆ. ಮಂಧಾನ ತಮ್ಮ ಏಕದಿನ ವೃತ್ತಿಜೀವನದ 10ನೇ ಶತಕ ದಾಖಲಿಸಿದ್ದಾರೆ. ಇದರೊಂದಿಗೆ ಮಂಧಾನ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 3 ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ.
ಐರ್ಲೆಂಡ್ ವಿರುದ್ಧದ ಸ್ಮೃತಿ ಮಂಧಾನ 70 ಎಸೆತಗಳಲ್ಲಿ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ ಶತಕ ಗಳಿಸಿದ ಭಾರತೀಯ ಮಹಿಳಾ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮಂಧಾನ 80 ಎಸೆತಗಳಲ್ಲಿ 12 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳ ನೆರವಿನಿಂದ 135 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ.

ಸ್ಮೃತಿ ಮಂಧಾನ ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಒಂದರ ಹಿಂದೆ ಒಂದರಂತೆ ಶತಕ ಬಾರಿಸಿ ಸಾಕಷ್ಟು ರನ್ ಗಳಿಸಿದ್ದಾರೆ. ಇದೀಗ ಐರ್ಲೆಂಡ್ ವಿರುದ್ಧ ಮೂರ ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಸ್ಮೃತಿ ಮಂಧಾನ ಬಿರುಸಿನ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದಾರೆ. ಅಂತಿಮ ಏಕದಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧಾನ ಶತಕ ಸಿಡಿಸಿ ಸಂಭ್ರಮಿಸಿದ್ದು, ತಮ್ಮ ಏಕದಿನ ವೃತ್ತಿಜೀವನದ 10ನೇ ಶತಕವನ್ನು ಗಳಿಸಿದ್ದಾರೆ. ಈ ಶತಕದೊಂದಿಗೆ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10 ಶತಕಗಳನ್ನು ಪೂರೈಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗರಾಗಿದ್ದಾರೆ.
ಈಗಾಗಲೇ ಭಾರತ ಪರ ಅತಿ ಹೆಚ್ಚು ಶತಕ ಬಾರಿಸಿದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆ ಸ್ಮೃತಿ ಮಂಧಾನ ಪಾತ್ರರಾಗಿದ್ದರು. ಅವರ ನಂತರ ಈ ಪಟ್ಟಿಯಲ್ಲಿ ಭಾರತದ ಪರ 7 ಏಕದಿನ ಶತಕಗಳನ್ನು ಗಳಿಸಿರುವ ಮಾಜಿ ನಾಯಕಿ ಮಿಥಾಲಿ ರಾಜ್ ಹೆಸರು ಇದೆ. ಹರ್ಮನ್‌ಪ್ರೀತ್ ಕೌರ್ ಅವರ ಹೆಸರಿನಲ್ಲಿ 6 ಏಕದಿನ ಶತಕಗಳಿವೆ.
ಸ್ಮೃತಿ ಮಂಧಾನ ಶತಕ ಬಾರಿಸುತ್ತಿದ್ದಂತೆ ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ
ಮೂರನೇ ಮಹಿಳಾ ಬ್ಯಾಟರ್ ಆಗಿದ್ದಾರೆ. ಅಲ್ಲದೆ, ಅವರು ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ಅವರ 10 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಅವರ ಹೆಸರಿನಲ್ಲಿ ಗರಿಷ್ಠ 15 ಶತಕಗಳಿವೆ. ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ 13 ಶತಕಗಳನ್ನು ಬಾರಿಸಿದ್ದಾರೆ.
ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ) - 15
ಸುಜಿ ಬೇಟ್ಸ್ (ನ್ಯೂಜಿಲೆಂಡ್) - 13
ಸ್ಮೃತಿ ಮಂಧಾನ (ಭಾರತ) - 10*
ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಇದೀಗ ಮಹಿಳಾ ಕ್ರಿಕೆಟ್‌ನಲ್ಲಿ ಮಂಧಾನಾ ತಮ್ಮ ಹೆಸರನ್ನು ಈ ದಾಖಲೆ ಪಟ್ಟಿಗೆ ನೋಂದಾಯಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 2013ರಲ್ಲಿ ಜೈಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು.