IND vs NZ: ವಿರಾಟ್, ರೋಹಿತ್ ಆಕರ್ಷಣೆ: ಪಂದ್ಯದ ಸಮಯ, ನೇರ ಪ್ರಸಾರದ ಮಾಹಿತಿ
ಟೀಮ್ ಇಂಡಿಯಾ ಹೊಸ ವರ್ಷವನ್ನು ಏಕದಿನ ಸರಣಿಯೊಂದಿಗೆ ಆರಂಭಿಸಲಿದೆ. ಭಾನುವಾರ (ಜ.11) ಶುಭಮನ್ ಗಿಲ್ ಪಡೆ, ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಆತಿಥೇಯ ತಂಡ, ವರ್ಷದ ಆರಂಭವನ್ನು ಗೆಲುವಿನೊಂದಿಗೆ ಆಚರಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರರು ಕಣಕ್ಕೆ ಇಳಿಯಲಿದ್ದು ಎಲ್ಲರ ಚಿತ್ತ ಕದಿದ್ದಾರೆ.
ಉಭಯ ತಂಡಗಳು ಈಗಾಗಲೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಒಟ್ಟು 120 ಬಾರಿ ಕಾದಾಟ ನಡೆಸಿವೆ. ಈ ವೇಳೆ ಟೀಮ್ ಇಂಡಿಯಾ 62 ಗೆಲುವು ದಾಖಲಿಸಿದ್ದು, ನ್ಯೂಜಿಲೆಂಡ್ 50 ಬಾರಿ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರ ನಡೆದಿದ್ದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್, ತವರಿನಲ್ಲಿ ಮೊದಲ ಬಾರಿಗೆ ಬ್ಲ್ಯೂ ಜೆರ್ಸಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದು ತಂಡ ಸೇರಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಪರ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿ ಅಬ್ಬರಿಸಿದ್ದರು. ಈ ಸರಣಿಯಲ್ಲಿ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡಿದ್ದರು. ಅಲ್ಲದೆ ದೇಶೀಯ ವಿಜಯ್ ಹಾಜರೆ ಟ್ರೋಫಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಇಬ್ಬರೂ ಆಟಗಾರರ ಮೇಲೆ ನಿರೀಕ್ಷೆಗಳು ಹೆಚ್ಚಿವೆ.
ರಾಹುಲ್ ಮೇಲೆ ಕಣ್ಣು
ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಕಣಕ್ಕೆ ಇಳಿಯಲಿದ್ದು, ಆಲ್‌ರೌಂಡರ್ ರೂಪದಲ್ಲಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದರೆ, ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಎದುರಾಳಿಗಳನ್ನು ಕಾಡಬಲ್ಲರು.
ನ್ಯೂಜಿಲೆಂಡ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ವಿಲ್ ಯಂಗ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ತಮ್ಮ ಸ್ಥಿರ ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಕೈಲ್ ಜೇಮಿಸನ್, ಮೈಕೆಲ್ ರೇ, ಆದಿತ್ಯ ಅಶೋಕ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಕಾಟ ನೀಡಬಲ್ಲರು.
ಪಿಚ್ ಯಾರಿಗೆ ಸಹಾಯ ನೀಡಲಿದೆ?
ವಡೋದರಾದ ಕೋಟಂಬಿ ಕ್ರೀಡಾಂಗಣವು ಏಕದಿನ ಕ್ರಿಕೆಟ್ ಪಂದ್ಯಕ್ಕೆ ಉತ್ತಮವಾಗಿದೆ. ಭಾನುವಾರ ಮಳೆ ಬರುವ ಸಾಧ್ಯತೆ ಇಲ್ಲ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲಿದೆ. ಅಲ್ಲದೆ ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ ಬೀಳುವ ಸಂಭವವಿದೆ.
ಭಾರತ, ನ್ಯೂಜಿಲೆಂಡ್ ನಡುವಣ ಮೊದಲ ಪಂದ್ಯ ಆರಂಭವಾಗುವುದು ಯಾವಾಗ?
ಪಂದ್ಯ ಹಗಲು ರಾತ್ರಿ ನಡೆಯುತ್ತಿರುವುದರಿಂದ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಇನ್ನು ಟಾಸ್ ಪಂದ್ಯಕ್ಕೂ ಅರ್ಧಗಂಟೆಗೂ ಮುನ್ನ ನಡೆಯಲಿದೆ.

ಮೊದಲ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಭಾರತ, ನ್ಯೂಜಿಲೆಂಡ್ ನಡುವಣ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್ ಸ್ಟಾರ್ ಆಪ್‌ನಲ್ಲಿ ನೋಡಬಹುದು.
ಹೇಗಿರಲಿದೆ ಭಾರತದ ಸಂಭಾವ್ಯ ತಂಡ?
ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಡೆವೊನ್ ಕಾನ್ವೇ, ನಿಕ್ ಕೆಲ್ಲಿ, ವಿಲ್ ಯಂಗ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಝಾಕ್ ಫೌಲ್ಕ್ಸ್, ಕೈಲ್ ಜೇಮಿಸನ್, ಮೈಕೆಲ್ ರೇ, ಆದಿತ್ಯ ಅಶೋಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications