
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.
ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ಎರಡನೇ ಪಂದ್ಯಕ್ಕೂ ಅದೇ ತಂಡವನ್ನು ಉಳಿಸಿಕೊಂಡಿದೆ. ರಾಯ್‌ಪುರ ಪಿಚ್ ವೇಗಿಗಳಿಗೆ ನೆರವಾಗಲಿದ್ದು, ಉಮ್ರಾನ್ ಮಲಿಕ್ ತಂಡವನ್ನು ಸೇರಲಿದ್ದಾರೆ ಎನ್ನಲಾಗಿತ್ತು, ಆದರೂ ಅವರು ತಂಡಕ್ಕೆ ಸೇರುವಲ್ಲಿ ವಿಫಲರಾಗಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ 12 ರನ್‌ಗಳ ರೋಚಕ ಜಯ ಸಾಧಿಸಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಮೊದಲನೇ ಪಂದ್ಯದಲ್ಲಿ 350 ರನ್‌ಗಳ ಬೃಹತ್ ಗುರಿಯದ್ದರೂ ಸಮೀಪಕ್ಕೆ ಬಂದು ಸೋತ ನ್ಯೂಜಿಲೆಂಡ್ ಸಾಕಷ್ಟು ಬಲಿಷ್ಠವಾಗಿದೆ.

ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಇಲ್ಲಿ ಐಪಿಎಲ್, ಚಾಂಪಿಯನ್ ಲೀಗ್ ಪಂದ್ಯಗಳು ಮಾತ್ರ ನಡೆದಿವೆ. ಭಾರತ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಹಸಿರು ಪಿಚ್ ಸಿದ್ಧಪಡಿಸಲಾಗಿದೆ.
ಸವಾಲಿಗೆ ಸಿದ್ಧವಾಗುತ್ತಿದ್ದೇವೆ ಎಂದ ರೋಹಿತ್
2023ರ ಏಕದಿನ ವಿಶ್ವಕಪ್‌ಗಾಗಿ ತಯಾರಿ ಆರಂಭವಾಗಿದ್ದು, ಎಲ್ಲಾ ಪರಿಸ್ಥಿತಿಗಳಲ್ಲಿಯೂ ತಂಡವನ್ನು ಆಡಲು ಸಿದ್ಧವಾಗಿರುವಂತೆ ಮಾಡಬೇಕು ಎಂದು ನಾಯಕ ರೋಹಿತ್ ಶರ್ಮಾ ಟಾಸ್ ಸಂದರ್ಭದಲ್ಲಿ ಹೇಳಿದ್ದಾರೆ.

ಅಭ್ಯಾಸದ ವೇಳೆ ಇಬ್ಬನಿ ಇತ್ತು ಆದರೆ ಪಂದ್ಯದ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇಲ್ಲ ಎಂದು ವಾರು ಹೇಳಿದರು. ಕಷ್ಟಕರ ಪರಿಸ್ಥಿತಿಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಬೇಕಿದೆ. ಮೊದಲ ಪಂದ್ಯದಲ್ಲಿ ಕೂಡ ನಾವು ಅದನ್ನೇ ಮಾಡಿದೆವು ಎಂದು ರೋಹಿತ್ ಶರ್ಮಾ ಹೇಳಿದರು.
ಮತ್ತೊಂದೆಡೆ, ನ್ಯೂಜಿಲೆಂಡ್ ಕೂಡ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಶ್ ಸೋಧಿ ಸಂಪೂರ್ಣವಾಗಿ ಫಿಟ್ ಆಗದ ಕಾರಣ ಅವರು ಈ ಪಂದ್ಯದಲ್ಲಿ ಕೂಡ ಆಡುತ್ತಿಲ್ಲ ಎಂದು ನಾಯಕ ಟಾಮ್ ಲಾಥಮ್ ತಿಳಿಸಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್