3 ವರ್ಷಗಳ ಬಳಿಕ ರೋಹಿತ್ ಶರ್ಮಾ ಭರ್ಜರಿ ಶತಕ: ಪಾಂಟಿಂಗ್ ದಾಖಲೆ ಸರಿಗಟ್ಟಿದ ನಾಯಕ

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ರನ್ ಮಳೆ ಹರಿಸಿದೆ. ಟೀಮ್ ಇಂಡಿಯಾದ ಆರಂಭರು ಅಮೋಘ ಬ್ಯಾಟಿಂಗ್ ನಡೆಸಿದ್ದು ಬೃಹತ್ ಮೊತ್ತಕ್ಕೆ ಅಡಿಪಾಯಹಾಕಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಮೋಘ ಶತಕ ಸಿಡಿಸಿದ್ದು ಮೂರು ವರ್ಷಗಳ ಶತಕದ ಕೊರತೆ ನೀಗಿಸಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಅವರ ದೊಡ್ಡ ಮೈಲಿಗಲ್ಲೊಂದನ್ನು ಸರಿಗಟ್ಟಿದ್ದಾರೆ. ಮತ್ತೋರ್ವ ಆಟಗಾರ ಶುಬ್ಮನ್ ಗಿಲ್ ಕೂಡ ಶತಕ ಸಿಡಿಸಿದ್ದಾರೆ.
ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೇವಲ 82 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ ದ್ವಿಶತಕದ ಜೊತೆಯಾಟವನ್ನು ನೀಡಿ ಬೇರ್ಪಟ್ಟಿದ್ದಾರೆ.

ಪಾಂಟಿಂಗ್ ದಾಖಲೆ ಸರಿಗಟ್ಟಿದ ರೋಹಿತ್
ಈ ಶತಕದ ಜೊತೆಗೆ ರೋಹಿತ್ ಶರ್ಮಾ ಏಕದಿನ ಶತಕಗಳ ಪಟ್ಟಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 30ನೇ ಶತಕ ಸಿಡಿಸಿರುವ ರೋಹಿತ್, ಈ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಆಟಗಾರರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜೊತೆಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಏಕದಿನ ಶತಕಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾಗಿಂತ ಈಗ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಮಾತ್ರವೇ ಮುಂದಿದ್ದಾರೆ.

3 ವರ್ಷಗಳ ಬಳಿಕ ಸಿಡಿದ ಏಕದಿನ ಶತಕ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಶತಕ ಸಿಡಿಸದೆ ಬರೊಬ್ಬರಿ ಮೂರು ವರ್ಷಗಳೇ ಕಳೆದಿತ್ತು. 2020ರ ಜನವರಿ 19ರಂದು ಆಸ್ಟ್ರೇಲಿಯಾ ವಿರುದ್ಧ ಬೆಂಗಳುರಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಕೊನೆಯ ಏಕದಿನ ಶತಕ ಸಿಡಿಸಿದ್ದರು. ಅದಾದ ಬಳಿಕ ರೋಹಿತ್ ಶರ್ಮಾ 5 ಅರ್ಧ ಶತಕ ಸಿಡಿಸಿದ್ದಾರಾದರು ಕೂಡ ಶತಕದ ಸನಿಹಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ನಾಯಕನ ವಿರುದ್ಧವೂ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.

ರೋಹಿತ್-ಗಿಲ್ ಭರ್ಜರಿ ಜೊತೆಯಾಟ
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಭರ್ಜರಿ ಆರಂಭವನ್ನು ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 26.1 ಓವರ್‌ನಲ್ಲಿ 212 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟರು. ರೋಹಿತ್ ಶರ್ಮಾ 85 ಎಸೆತಗಳಲ್ಲಿ 101 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ಇನ್ನಿಂಗ್ಸ್‌ನಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿ ಒಳಗೊಂಡಿತ್ತು. ಇನ್ನು ಶುಬ್ಮನ್ ಗಿಲ್ 78 ಎಸೆತಗಳಲ್ಲಿ 112 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಗಿಲ್ ಬ್ಯಾಟ್‌ನಿಂದ 5 ಸಿಕ್ಸರ್ ಹಾಗೂ 13 ಬೌಂಡರಿ ಸಿಡಿದಿದೆ.

ಇತ್ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಜಾಕೋಬ್ ಡಫ್ಫಿ, ಬ್ಲೇರ್ ಟಿಕ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications