IND vs NZ 3rd ODI: ನಿರ್ಣಾಯಕ ಪಂದ್ಯದಲ್ಲಿ ಗೆಲ್ಲೋದು ಯಾರು? ರಾಹುಲ್ ಆಕರ್ಷಣೆ
ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಮೂರನೇ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದರಿಂದ ಮೂರನೇ ಪಂದ್ಯ ಗೆಲ್ಲುವುದು ಯಾರು ಎಂಬ ಪ್ರಶ್ನೆ ಮೂಡಿದೆ. ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ತವರಿನಲ್ಲಿ ಮತ್ತೊಂದು ಏಕದಿನ ಸರಣಿ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ.
ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ 7 ವಿಕೆಟ್‌ಗಳಿಂದ ಪಂದ್ಯ ಗೆದ್ದು ಸರಣಿ ಜೀವಂತವಾಗಿರಿಸಿತ್ತು. ಹೀಗಾಗಿ ಮೂರನೇ ಪಂದ್ಯ ರೋಚಕತೆ ಹೆಚ್ಚಿಸಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಸಹ, ಕಿವೀಸ್ ತಂಡದ ಆಟಗಾರರು ಸಂಘಟಿತ ಆಟದ ಮೇಲೆ ವಿಶ್ವಾಸವನ್ನು ಇಟ್ಟಿದ್ದಾರೆ. ಈ ಪಿಚ್ ಬ್ಯಾಟರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದ್ದು, ದೊಡ್ಡ ಮೊತ್ತವನ್ನು ನಿರೀಕ್ಷಿಸಲಾಗಿದೆ.

ಭಾರತದ ಪರ ಆರಂಭಿಕರಾಗಿ ಕಣಕ್ಕೆ ಇಳಿಯುವ ನಾಯಕ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಬೇಕಿದೆ. ರೋಹಿತ್ ಶರ್ಮಾ ಈ ಸರಣಿಯಲ್ಲಿ ಒಂದೂ ಬಾರಿಯೂ 50ಕ್ಕೂ ಹೆಚ್ಚು ರನ್ ಬಾರಿಸಿಲ್ಲ. ಹೀಗಾಗಿ ಇವರ ಮೇಲೆ ಒತ್ತಡವಿದೆ. ಇನ್ನು ಇಂದೋರ್ ಮೈದಾನ ರೋಹಿತ್‌ಗೆ ನೆಚ್ಚಿನ ಅಂಗಳಗಳಲ್ಲಿ ಒಂದಾಗಿದ್ದು ಭಾನುವಾರ ರೋಹಿತ್ ಬಿಗ್ ಇನಿಂಗ್ಸ್ ಕಟ್ಟುತ್ತಾರಾ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ವಿರಾಟ್ ಕೊಹ್ಲಿ ಸೊಗಸಾದ ಫಾರ್ಮ್‌ನಲ್ಲಿದ್ದಾರೆ. ಇದೇ ಫಾರ್ಮ್ ಮುಂದುವರಿಸುವ ಅನಿವಾರ್ಯತೆ ಇದೆ. ಶ್ರೇಯಸ್ ಅಯ್ಯರ್ ಎರಡನೇ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಇನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಶತಕ ಬಾರಿಸಿದ್ದ ಕೆಎಲ್ ರಾಹುಲ್ ಭರವಸೆ ಹೆಚ್ಚಿಸಿದ್ದಾರೆ. ಇವರು ಎರಡನೇ ಏಕದಿನ ಪಂದ್ಯದಲ್ಲಿ ಆಡಿದ ಧಾಟಿ ಅಭಿಮಾನಿಗಳ ಮನ ಗೆದ್ದಿದೆ. ಅಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಬೇಕಿದೆ.
ಅರ್ಷದೀಪ್‌ಗೆ ಸಿಗುತ್ತಾ ಅವಕಾಶ
ಮೂರನೇ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಬದಲಿಗೆ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆಗಳು ಎದ್ದಿವೆ. ಮೊಹಮ್ಮದ್ ಸಿರಾಜ್ ಹಾಗೂ ಹರ್ಷಿತ್ ರಾಣಾ ಕಣಕ್ಕೆ ಇಳಿಯುವುದು ಪಕ್ಕಾ ಆದಂತೆ ಕಾಣುತ್ತಿದೆ. ಇನ್ನು ಚೈನಾಮನ್ ಬೌಲರ್ ಕುಲ್‌ದೀಪ್ ಯಾದವ್ ಸ್ಥಿರ ಪ್ರದರ್ಶನ ನೀಡಿ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಕಾಟ ನೀಡಬೇಕಿದೆ.
ಡೇರಿಲ್ ಮಿಚೆಲ್ ಆಕರ್ಷಣೆ
ನ್ಯೂಜಿಲೆಂಡ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಇದರಲ್ಲಿ ಡೇರಿಲ್ ಮಿಚೆಲ್ ಭರವಸೆ ಮೂಡಿಸಿದ್ದಾರೆ. ಇವರು ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರೆ, ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದರು. ಆರಂಭಿಕರಾಗಿ ಕಾಣಿಸಿಕೊಳ್ಳುವ ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್ ಉತ್ತಮ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಇನ್ನು ವಿಲ್ ಯಂಗ್ ನೈಜ ಆಟವಾಡುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಹೀ, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುವ ಅನಿವಾರ್ಯತೆ ಇದೆ. ಅಂದಾಗ ಸರಣಿ ಗೆಲುವಿನ ನಗೆ ಬೀರಲು ಸಾಧ್ಯ. ಬೌಲಿಂಗ್ ವಿಭಾಗದಲ್ಲಿ ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜಾಮಿಸನ್, ಝಾಕ್ ಫೌಲ್ಕ್ಸ್ ಸರಿಯಾದ ಸ್ಥಳಗಳಲ್ಲಿ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications