ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಹೀಗಾಗಿ ಮೂರನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯವನ್ನು ಗೆದ್ದ ತಂಡ ಸರಣಿಯನ್ನು ಗೆಲ್ಲಲಿದೆ. ಕಿವೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸ್ಟಾರ್ ಬೌಲರ್ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಆಡಿದ ಎರಡೂ ಪಂದ್ಯಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿರುವ ಸ್ಟಾರ್, ಏಕದಿನ ಕ್ರಿಕೆಟ್ ಆಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಸ್ಟಾರ್ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಸಂಪೂರ್ಣ ಫಿಟ್ ಆಗಿದ್ದರೂ ಸಹ ಇವರನ್ನು ತಂಡದಲ್ಲಿ ಆಯ್ಕೆ ಮಾಡದೇ ಇರುವುದಕ್ಕೆ ಹಲವು ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾದ ಭರವಸೆಯ ವೇಗದ ಬೌಲರ್‌ಗಳಲ್ಲಿ ಅರ್ಷದೀಪ್ ಒಬ್ಬರು. ಇವರು ಟಿ20 ತಂಡದ ಖಾಯಂ ಸದಸ್ಯರಾಗಿದ್ದಾರೆ. ಈ ಸ್ವರೂಪದಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಸಾಧಕರ ಪಟ್ಟಿಯಲ್ಲಿ ಇವರಿಗೆ ಅಗ್ರ ಸ್ಥಾನ. ಇವರು ಭಾರತದ ಪರ 72 ಟಿ20 ಪಂದ್ಯಗಳನ್ನು ಆಡಿದ್ದು, 110 ವಿಕೆಟ್ ಪಡೆದಿದ್ದಾರೆ.

ಬ್ಯಾಟರ್‌ಗಳನ್ನು ಬಹುವಾಗಿ ಕಾಡುವ ಅರ್ಷದೀಪ್ ಸಿಂಗ್ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಬೌಲರ್. ಆದರೆ ಇವರ ಅನುಭವದ ಲಾಭವನ್ನು ಭಾರತ ತಂಡ ಪಡೆಯುತ್ತಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. ಈ ವರೆಗೆ ಕೇವಲ 14 ಏಕದಿನ ಪಂದ್ಯಗಳನ್ನು ಆಡಿರುವ ಅರ್ಷದೀಪ್ ಸಿಂಗ್ ಸಂಪೂರ್ಣ ಫಿಟ್ ಆಗಿದ್ದರೂ ಸಹ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಎಡುವುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಈಗ ನಡೆಯುತ್ತಿರುವ ಏಕದಿನ ಸರಣಿ ಭಾರತದ ಪಾಲಿಗೆ ಅಷ್ಟೊಂದು ಮುಖ್ಯವಲ್ಲ. ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ 2026ರ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಈ ವಿಶ್ವಕಪ್‌ನಲ್ಲಿ ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾದ ಬ್ರಹ್ಮಾಸ್ತ್ರ ಎಂಬುದನ್ನು ಅರಿತು ಮ್ಯಾನೇಜ್ಮೆಂಟ್ ಇವರಿಗೆ ಬೆಂಚ್ ಕಾಯಿಸುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನು ಅಭಿಮಾನಿಗಳಲ್ಲಿ ಸದ್ಯ ಪ್ರಶ್ನೆಯೊಂದು ಮೂಡಿದೆ. ಇದರ ಅನುಸಾರ ಹರ್ಷಿತ್ ರಾಣಾ ಸದ್ಯ ಟೀಮ್ ಇಂಡಿಯಾದ ಪರ ಎರಡೂ ಫಾರ್ಮೆಟ್‌ಗಳನ್ನು ಆಡುತ್ತಿದ್ದಾರೆ. ಇವರು ಕಿವೀಸ್ ವಿರುದ್ಧದ ಎರಡೂ ಪಂದ್ಯಗಳನ್ನು ಆಡಿದ್ದಾರೆ. ಇವರಿಗೆ ವಿಶ್ರಾಂತಿ ಅಗತ್ಯ ಇಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ.

ಕನ್ನಡಿಗ ಪ್ರಸಿದ್ಧ್ ಕೃಷ್ಣ ವಿಕೆಟ್ ಬೇಟೆ ನಡೆಸುವಲ್ಲಿ ವಿಫಲರಾಗಿದ್ದರೂ, ಅವರಿಗೆ ಅವಕಾಶ ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ ಹುಟ್ಟಿದೆ. ಇವರು ನ್ಯೂಜಿಲೆಂಡ್ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು ಕೇವಲ ಮೂರು ವಿಕೆಟ್ ಪಡೆದಿದ್ದಾರೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಗಿಲ್ ಅವಕಾಶ ನೀಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.