ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯ ಮುಂಬೈನ ವಾಂಖೇಡೆ ಅಂಗಳದಲ್ಲಿ ನವೆಂಬರ್ 1 ರಿಂದ ಆರಂಭವಾಗಲಿದೆ. ಹೈವೋಲ್ಟೆಜ್ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಸರಣಿಯಲ್ಲಿ ಸೋಲು ಕಂಡಿರುವ ಟೀಮ್ ಇಂಡಿಯಾ ಕೊನೆಯ ಟೆಸ್ಟ್ ಗೆದ್ದು ಮಾನ ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ. ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಈಗಾಗಲೇ ಆಡಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ವಿಶ್ವಾಸದಲ್ಲಿದೆ. ಇನ್ನು ಟೀಮ್ ಇಂಡಿಯಾ ತಾನು ಮಾಡಿದ ತಪ್ಪಿನಿಂದ ಪಾಠ ಕಲಿತು ಆಡಬೇಕಿದೆ. ಟೀಮ್ ಇಂಡಿಯಾ ಈ ಸರಣಿಯಲ್ಲಿ ಸೋಲು ಕಾಣಲು ಟಾಪ್ ಆರ್ಡರ್ ಬ್ಯಾಟರ್‌ಗಳ ವೈಫಲ್ಯ ಪ್ರಮುಖವಾಗಿದೆ. ಈ ಸರಣಿಯಲ್ಲಿ ಸ್ಟಾರ್ ಆಟಗಾರರು ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ತಮ್ಮ ನ್ಯೂನತೆಗಳನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವ ಅನಿವಾರ್ಯತೆ ಟೀಮ್ ಇಂಡಿಯಾ ಆಟಗಾರರದ್ದಾಗಿದೆ.

ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ತಂಡದಿಂದ ಕೈ ಬಿಡಲಾಗಿದ್ದ ಅನುಭವಿ ಆಟಗಾರ ಕೆಎಲ್ ರಾಹುಲ್ ಅವರಿಗೆ ಮುಂಬೈನಲ್ಲಿ ಆಡುವ ಅವಕಾಶ ಸಿಗುತ್ತದಾ ಎಂದು ಕಾದು ನೋಡಬೇಕಿದೆ. ಇವರ ಸ್ಥಾನವನ್ನು ತುಂಬಿದ್ದ ಸರ್ಫರಾಜ್ ಖಾನ್ ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಹೀಗಾಗಿ ಇವರ ಬದಲಿಗೆ ರಾಹುಲ್‌ಗೆ ಚಾನ್ಸ್ ಸಿಗುತ್ತದಾ ಎಂಬ ಪ್ರಶ್ನೆಗಳು ಎದ್ದಿವೆ. ಇನ್ನು ಟಾಪ್ ಆರ್ಡರ್ ಬ್ಯಾಟಿಂಗ್‌ನಲ್ಲಿ ಯಾವುದೇ ಬದಲಾವಣೆ ಕಾಣುವುದು ಡೌಟ್. ನಾಯಕ ರೋಹಿತ್ ಶರ್ಮಾ ಹಾಗೂ ಯುವ ಆಟಗಾರ ಯಶಸ್ವಿ ಜೈಸ್ವಾಲ್ ತವರಿನ ಅಂಗಳದಲ್ಲಿ ಅಬ್ಬರದ ಪ್ರದರ್ಶನ ನೀಡಬೇಕಿದೆ. ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಮೈದಾನಕ್ಕೆ ಇಳಿದಿದ್ದ ರಿಷಭ್ ಪಂತ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಟವಾಡಲಿಲ್ಲ. ಅಲ್ಲದೆ ಗಾಯದ ಸಮಸ್ಯೆ ಅವರನ್ನು ಕಾಡಿದಂತೆ ಕಂಡು ಬಂದಿದೆ. ಹೀಗಾಗಿ ಮೂರನೇ ಟೆಸ್ಟ್‌ನಲ್ಲಿ ಇವರ ಸ್ಥಾನವನ್ನು ಜುರೇಲ್ ತುಂಬುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.
ಇನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಇಬ್ಬರೂ ಅಂಗಳಕ್ಕೆ ಇಳಿಯಬಹುದು. ಮುಂದಿನ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಇಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಬಹುದಾಗಿದೆ. ಪುಣೆ ಟೆಸ್ಟ್‌ನಲ್ಲಿ ಕ್ಲಾಸಿಕ್ ಸ್ಪಿನ್ ಬೌಲಿಂಗ್ ನಡೆಸಿದ ವಾಷಿಂಗ್ಟನ್ ಸುಂದರ್ ಮುಂಬೈನಲ್ಲಿ ಅಂಗಳ ಪ್ರವೇಶಿಸಿಲಿದ್ದಾರೆ. ಇನ್ನು ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಇವರಿಗೆ ಸ್ಥಾನ ಸಿಗುತ್ತದಾ ಕಾದು ನೋಡಬೇಕಿದೆ.
ವೇಗದ ಬೌಲಿಂಗ್ ನೊಗವನ್ನು ಜಸ್ಪ್ರಿತ್ ಬುಮ್ರಾ ಹೊರ ಬಹುದು. ಮಂಗಳವಾರ ತಂಡ ಸೇರಿದ್ದ ಹರ್ಷಿತ್ ರಾಣಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಡೌಟ್ ಎಂದು ಹೇಳಲಾಗುತ್ತಿದೆ. ಇನ್ನು ಮೊಹಮ್ಮದ್ ಸಿರಾಜ್ ಮತ್ತೆ ಕಮ್ ಬ್ಯಾಕ್ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಕಿವೀಸ್ ಆತ್ಮ ವಿಶ್ವಾಸದಲ್ಲಿದೆ. ಅಲ್ಲದೆ ಮೂರನೇ ಟೆಸ್ಟ್‌ನಲ್ಲಿ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ನ್ಯೂಜಿಲೆಂಡ್ ತಂಡದ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಮೂರನೇ ಟೆಸ್ಟ್‌ಗೂ ಅಲಭ್ಯರಾಗಿದ್ದಾರೆ. ಉಳಿದಂತೆ ತಂಡದಲ್ಲಿ ಬದಲಾವಣೆ ಕಾಣುವುದು ಬಹುತೆಕ ಅನುಮಾನವಾಗಿದೆ.