ಮುಂಬೈ ಟೆಸ್ಟ್: ನಾಲ್ಕು ವಿಕೆಟ್ ಕಿತ್ತು ಆಘಾತ ನೀಡಿದ ಅಜಾಜ್ ಹೇಳಿದ್ದಿಷ್ಟು!

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದಲ್ಲಿ ನ್ಯೂಜಿಲೆಂಡ್ ಹಾಗೂ ಬಾರತ ಎರಡು ತಂಡಗಳು ಕೂಡ ಮೊದಲ ದಿನದಾಟದ ಗೌರವ ಪಡೆದುಕೊಂಡಿದೆ. ಟೀಮ್ ಇಂಡಿಯಾ ಪರವಾಗಿ ಮಯಾಂಕ್ ಅಗರ್ವಾಲ್ ಮಿಂಚಿದರೆ ನ್ಯೂಜಿಲೆಂಡ್ ತಂಡದ ಪರವಾಗಿ ಸ್ಪಿನ್ನರ್ ಅಜಾಜ್ ಭಾರತದ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದಾರೆ. ಮೊದಲ ದಿನದಾಟದಲ್ಲಿ ಭಾರತ ಕಳೆದುಕೊಂಡ ನಾಲ್ಕು ವಿಕೆಟ್‌ಗಳು ಕೂಡ ಅಜಾಜ್ ಪಾಲಾಗಿರುವುದು ನೋಡಿದರೆ ಟೀಮ್ ಇಂಡಿಯಾ ಪಾಲಿಗೆ ಅಜಾಜ್ ಎಷ್ಟು ಅಪಾಯಕಾರಿಯಾಗಿದ್ದಾರೆ ಎಂದು ಅರಿವಾಗುತ್ತದೆ.
ಈ ಪ್ರದರ್ಶನದ ಬಳಿಕ ಅಜಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮದರ್ಭದಲ್ಲಿ ಅವರು ತನ್ನ ಕನಸು ಈ ಮೂಲಕ ಸಾಕಾರಗೊಂಡಿತು ಎಂದಿದ್ದಾರೆ. ಮೊದಲ ದಿನದಾಟದಲ್ಲಿ ಅಜಾಜ್ ಪಟೇಲ್ 29 ಓವರ್‌ಗಳ ಬೌಲಿಂಗ್ ನಡೆಸಿದ್ದಾರೆ. 73 ರನ್‌ಗಳನ್ನು ನೀಡಿ 4 ವಿಕೆಟ್ ಪಡೆದಿದ್ದಾರೆ ಕಿವಿಸ್ ಸ್ಪಿನ್ನರ್. ಈ ಮೂಲಕ ನ್ಯೂಜಿಲೆಂಡ್ ತಂಡ ಒಂದು ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಕಾರಣವಾದರು.
ಮೊದಲ ದಿನದಾಟ ಅಂತ್ಯವಾದ ಬಳಿಕ ಮಾತನಾಡಿದ ಅಜಾಜ್ ತಮ್ಮ ಪ್ರದರ್ಶನಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಕನಸು ನನಸಾಗುವುದೆಂದರೆ ಇದೇ ಅಲ್ಲವೆ. ಮೊದಲ ದಿನದಾಟದಲ್ಲಿ ಕಣಕ್ಕಿಳಿದು ನಾಲ್ಕು ವಿಕೆಟ್‌ಗಳನ್ನು ಪಡೆಯುವುದೆಂದರೆ ಅದು ವಿಶೇಷವೆನಿಸುತ್ತದೆ. ಆದರೆ ಕೆಲ ಈಗ ಅರ್ಧ ಮಾತ್ರವೇ ಮುಗಿದಿದೆ. ನಾಳೆ ಕಣಕ್ಕಿಳಿದು ಕಠಿಣ ಪರಿಶ್ರಮದ ಮೂಲಕ ಉಳಿದ ಆರು ವಿಕೆಟ್‌ಗಳನ್ನು ಶೀಗ್ರವಾಗಿ ಪಡೆಯುವತ್ತ ನಾವು ಗಮನಹರಿಸಲಿದ್ದೇವೆ" ಎಂದಿದ್ದಾರೆ ಅಜಾಜ್.
"ನಾಲ್ಕು ವಿಕೆಟ್ ಪಡೆದು ನಾನು ಇಲ್ಲಿ ಕುಳಿತುಕೊಳ್ಳಲು ನಿಜಕ್ಕೂ ಅದೃಷ್ಟ ಮಾಡಿದ್ದೇನೆ. ನಾನು ನನ್ನ ತವರು ನಗರದಲ್ಲಿ ಇರುವುದಕ್ಕೆ ಸಂತಸಗೊಂಡಿದ್ದೇನೆ. ವಾಂಖೆಡೆ ಕ್ರೀಡಾಂಗಣ ನನಗೆ ನಿಜಕ್ಕೂ ವಿಶೇಷವಾಗಿದೆ" ಎಂದಿದ್ದಾರೆ. ನ್ಯೂಜಿಲೆಂಡ್ ಪರವಾಗಿ ಆಡುತ್ತಿರುವ ಅಜಾಜ್ ಪಟೇಲ್ ಮೂಲತಃ ಮಹಾರಾಷ್ಟ್ರದವರಾಗಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಅಜಾಜ್ ಪಟೇಲ್ ಮೊದಲಿಗೆ 44 ರನ್‌ಗಳಿಸಿದ್ದ ಶುಬ್ಮನ್ ಗಿಲ್ ವಿಕೆಟ್ ಪಡೆಯುವ ಮೂಲಕ ಆರಂಭಿಕ ಜೊತೆಯಾಟವನ್ನು ಭೇದಿಸಿದರು. ಅದಾದ ಬಳಿಕ ಮಧ್ಯಮ ಕ್ರಮಾಂಕದ ಇಬ್ಬರು ಪ್ರಮುಖ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ವಿಕೆಟ್‌ಅನ್ನು ಒಂದೇ ಓವರ್‌ನಲ್ಲಿ ಪಡೆಯುವ ಮೂಲಕ ಆಘಾತ ನೀಡಿದರು. ಅದಾದ ಬಳಿಕ ಶುಬ್ಮನ್ ಗಿಲ್ ಹಾಗೂ ಶ್ರೇಯಸ್ ಐಯ್ಯರ್ ಮತ್ತೊಂದು ದೊಡ್ಡ ಜೊತೆಯಾಟವನ್ನಾಡಲು ಮುನ್ನುಗ್ಗುತ್ತಿದ್ದಾಗ ಮತ್ತೊಮ್ಮೆ ಅಜಾಜ್ ಆಘಾತ ನೀಡಿದ್ದಾರೆ. ಶ್ರೇಯಸ್ ಐಯ್ಯರ್ ಅವರನ್ನು ಅಜಾಜ್ 18 ರನ್‌ಗಳಿಸಿದ್ದಾಗ ಔಟ್ ಂಆಡುವಲ್ಲಿ ಯಶಸ್ವಿಯಾದರು. ಈ ಮೂಲಕ ನಾಲ್ಕು ವಿಕೆಟ್ ಕೂಡ ಅಜಾಜ್ ಪಾಲಾಗಿದೆ.
ಟೀಮ್ ಇಂಡಿಯಾ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಜಯಂತ್ ಯಾದವ್, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್
ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications