ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸಟ್ ಸರಣಿಯನ್ನು ಟೀಮ್ ಇಂಡಿಯಾ ವಶಪಡಿಸಿಕೊಂಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ.
ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಕುಲದೀಪ್ ಯಾದವ್ ಅವರಿಗೆ ಅವಕಾಶ ಸಿಗುವ ನಿರೀಕ್ಷೆಯಿತ್ತು. ಆದರೆ ನಾಯಕ ರೋಹಿತ್ ಶರ್ಮಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಹೀಗಾಗಿ ತವರಿನ ಅಂಗಳದಲ್ಲಿ ಕುಲದೀಪ್ ಯಾದವ್ ದಾಖಲೆ ಸೃಷ್ಟಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಇದೀಗ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಸೃಷ್ಟಿಸುವ ಸನಿಹದಲ್ಲಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಅಕ್ಟೋಬರ್ 16 ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಆಡುವ ನಿರೀಕ್ಷೆಯಿದೆ. ಟೆಸ್ಟ್ ಸರಣಿಯಲ್ಲಿ ಅವರು ಏಕಾಂಗಿಯಾಗಿ ನ್ಯೂಜಿಲೆಂಡ್ ತಂಡಕ್ಕೆ ಕಂಟಕವಾಗಬಹುದು.ಜೊತೆಗೆ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕುಲದೀಪ್ ಯಾದವ್ ಅದ್ಭುತ ದಾಖಲೆಯನ್ನು ಮಾಡುವ ಅವಕಾಶವನ್ನು ಹೊಂದಿದ್ದಾರೆ.
ಕುಲದೀಪ್ ಯಾದವ್ ಭಾರತ ಪರ 158 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 294 ವಿಕೆಟ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುಲದೀಪ್ ಯಾದವ್ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಈ ಮೂಲಕ ಕುಲದೀಪ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರೈಸಲಿದ್ದಾರೆ. ಟೆಸ್ಟ್ ಸರಣಿಯ 3 ಪಂದ್ಯಗಳನ್ನು ಬೆಂಗಳೂರು, ಪುಣೆ ಮತ್ತು ಮುಂಬೈನಲ್ಲಿ ನನಡೆಯಲಿವೆ. ಈ ಮೂರು ಪಿಚ್‌ಗಳು ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿವೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕುಲದೀಪ್ ಯಾದವ್ ಸಾಕಷ್ಟು ದಾಖಲೆಗಳನ್ನುಸೃಷ್ಟಿಸುವ ಸಾಧ್ಯತೆಯಿದೆ.
ಟೀಮ್ ಇಂಡಿಯಾ ಪರ ಕುಲದೀಪ್ ಯಾದವ್ 12 ಟೆಸ್ಟ್ ಪಂದ್ಯಗಳಲ್ಲಿ 53 ವಿಕೆಟ್ ಕಬಳಿಸಿದ್ದಾರೆ. ಅವರು 4 ಬಾರಿ 5 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇದಲ್ಲದೇ ಕುಲದೀಪ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ 106 ಪಂದ್ಯಗಳಲ್ಲಿ 172 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ 5 ವಿಕೆಟ್ ಉರುಳಿಸಿದ್ದು, 2 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. 40 ಟಿ20 ಪಂದ್ಯಗಳಿಂದ 69 ವಿಕೆಟ್ ಪಡೆದಿದ್ದು, ಎರಡು ಬಾರಿ 5 ವಿಕೆಟ್ ಕಬಳಿಸಿದ್ದಾರೆ.