
ಭಾರತ-ನ್ಯೂಜಿಲೆಂಡ್ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ಎರಡನೇ ಟಿ20 ಪಂದ್ಯ ನಡೆಯುತ್ತಿದೆ.
ನವೆಂಬರ್ 18ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಸರಣಿಯ ಮೊದಲನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯಕ್ಕೂ ಮಳೆಯ ಆತಂಕ ಇತ್ತಾದರೂ, ಪಂದ್ಯದ ಆರಂಭಕ್ಕೆ ಮುನ್ನ ಮಳೆ ಸಂಪೂರ್ಣವಾಗಿ ನಿಂತಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ಪಡೆ ಬಲಿಷ್ಠ ಕಿವೀಸ್ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಭಾರತದ ಪರವಾಗಿ ಯಾರು ಇನ್ನಿಂಗ್ಸ್ ಆರಂಭಿಸುತ್ತಾರೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಇಶಾನ್ ಕಿಶನ್ ಜೊತೆ ರಿಷಬ್ ಪಂತ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ.
ತಂಡದಲ್ಲಿ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಭುವನೇಶ್ವರ್ ಕುಮಾರ್, ಅರ್ಷದೀಪ್, ಸಿರಾಜ್ ವೇಗದ ಬೌಲಿಂಗ್ ಆಯ್ಕೆಯಾಗಿದ್ದು, ಚಹಾಲ್ ಮತ್ತು ವಾಷಿಂಗ್ಟನ್ ಸುಂದರ್ ಸ್ಪಿನ್ನರ್ ಗಳಾಗಿದ್ದಾರೆ. ಹಾರ್ದಿಕ್ ಪಾಂಡ್ಯ 4ನೇ ವೇಗಿಯಾಗಿ ಬೌಲಿಂಗ್ ಮಾಡಲಿದ್ದಾರೆ.
ಮೌಂಟ್ ಮೌಂಗನುಯಿಯ ಬೇ ಓವಲ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಚಿಕ್ಕದಾದ ಬೌಂಡರಿಗಳನ್ನು ಹೊಂದಿದ್ದು, ಹೆಚ್ಚಿನ ರನ್ ಗಳಿಸುವ ಸಾಧ್ಯತೆ ಇದೆ. ಇಲ್ಲಿ ನಡೆದ ಕಳೆದ 12 ಪಂದ್ಯಗಳಲ್ಲಿ 6 ಬಾರಿ 180ಕ್ಕಿಂತ ಹೆಚ್ಚು ಸ್ಕೋರ್ ದಾಖಲಾಗಿದೆ.

ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ(ನಾಯಕ), ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಆಡಮ್ ಮಿಲ್ನೆ, ಲಾಕಿ ಫರ್ಗುಸನ್