ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಕರಾರುವಕ್ಕಾದ ಬೌಲಿಂಗ್ ಮಾಡುತ್ತಿದ್ದಾರೆ. ಅದರಲ್ಲೂ ರವಿಚಂದ್ರನ್ ಅಶ್ವಿನ್ ಅವರು ಕಿವೀಸ್ ಪಡೆಗೆ ತಮ್ಮ ಸ್ಪಿನ್ ಬೌಲಿಂಗ್ ಜಾದೂವನ್ನು ತೋರಿಸಿದ್ದಾರೆ.
ನ್ಯೂಜಿಲೆಂಡ್ ತಂಡದ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿರುವ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯೂಟಿಸಿ) ದಾಖಲೆ ಸೃಷ್ಟಿಸಿದ್ದಾರೆ. ಈ ದಾಖಲೆಯನ್ನು ಅಶ್ವಿನ್ ಸೃಷ್ಟಿಸಲು ಸರ್ಫರಾಜ್ ಖಾನ್ ಪ್ರಮುಖ ಕಾರಣರಾಗಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ ವಿಲ್ ಯಂಗ್ ಔಟ್ ಮಾಡುವಲ್ಲಿ ಸರ್ಫರಾಜ್ ಖಾನ್ ಅವರ ತೀರ್ಪು ಮಹ್ವತದಾಗಿತ್ತು. ಜೊತೆಗೆ ಪುಣೆ ಟೆಸ್ಟ್ ಪಂದ್ಯಕ್ಕೆ ತಿರುವು ಕೊಟ್ಟಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ ಅವರಿಗೆ ರಿವ್ಯೂ ತೆಗೆದುಕೊಳ್ಳಲು ಸರ್ಫರಾಜ್ ಖಾನ್ ಮನವೊಲಿಸಿರುವುದು ಗಮನ ಸೆಳೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಸದ್ದು ಮಾಡುತ್ತಿದೆ.

ಪುಣೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭದಲ್ಲಿ ನಾಯಕ ಟಾಮ್ ಲ್ಯಾಥಮ್ (15) ಅವರನ್ನು ಕಿವೀಸ್ ಕಳೆದುಕೊಂಡಿತ್ತು. ಇದಾದ ಬಳಿಕ ಒಂದಾದ ವಿಲ್ ಯಂಗ್ ಮತ್ತು ಡೆವೊನ್ ಕಾನ್ವೇ ಜೋಡಿ ಭಾರತಕ್ಕೆ ಭಾರೀ ಮೊತ್ತ ಕಲೆ ಹಾಕುವ ಎಚ್ಚರಿಕೆ ಕೊಟ್ಟಿತ್ತು. ಈ ಜೋಡಿ 46 ರನ್ ಗಳ ಜವಾಬ್ದಾಯುತ ಜೊತೆಯಾಟ ಆಡುವ ಮೂಲಕ ಕಿವೀಸ್ ತಂಡವನ್ನು ಮೇಲೆತ್ತಿತು. ಒಂದು ಹಂತದಲ್ಲಿ ನ್ಯೂಜಿಲೆಂಡ್ 1 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿ ಆರಾಮದಾಯಕ ಸ್ಥಿತಿಯಲ್ಲಿತ್ತು. ಇತ್ತ ಭಾರತ ವಿಕೆಟ್‌ಗಳ ಹುಡುಕಾಟದಲ್ಲಿತ್ತು.
ಈ ಸಂದರ್ಭದಲ್ಲಿ ಬೌಲಿಂಗ್ ದಾಳಿಗಿಳಿದ ರವಿಚಂದ್ರನ್ ಅಶ್ವಿನ್ ಅವರು ವಿಲ್ ಯಂಗ್‌ಗೆ ಲೆಗ್ ಸೈಡ್ ಬೌಲಿಂಗ್ ಮಾಡಿದರು. ಚೆಂಡು ಬ್ಯಾಟ್‌ಗೆ ಬಡಿದು, ವಿಕೆಟ್‌ಕೀಪರ್ ರಿಷಬ್ ಪಂತ್ ಕೈ ಸೇರಿತು. ಆದರೆ ಆನ್ ಫೀಲ್ಡ್ ಅಂಪೈರ್ ನಿರ್ಧಾರ ಔಟ್ ಆಗಿರಲಿಲ್ಲ. ಈ ಸಂದರ್ಭದಲ್ಲಿ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಹದ್ದಿನ ಕಣ್ಣಿಗೆ ಚೆಂಡು ಬ್ಯಾಟ್‌ಗೆ ತಗುಲಿರುವುದು ಕಾಣಿಸಿತ್ತು. ಅಲ್ಲದೆ, ಬ್ಯಾಟ್‌ಗೆ ಚೆಂಡು ಬಡಿದ ಶಬ್ದವೂ ಸರ್ಫರಾಜ್ ಖಾನ್ ಅವರಿಗೆ ಕೇಳಿಸಿತ್ತು. ಹೀಗಾಗಿ ತಕ್ಷಣ ನಾಯಕ ರೋಹಿತ್ ಶರ್ಮಾ ಬಳಿ ಓಡಿ ಬಂದ ಅವರು ರಿವ್ಯೂ ತೆಗೆದುಕೊಳ್ಳಲು ಮನವೊಲಿಸಿದರು.
ವಿಲ್ ಯಂಗ್ ಅವರ ಕೈಗವಸುಗಳಿಗೆ ಚೆಂಡು ತಗುಲಿದೆ. ದಯವಿಟ್ಟು ರಿವ್ಯೂ ತೆಗೆದುಕೊಳ್ಳಿ ಎಂದು ನಾಯಕನಿಗೆ ಸರ್ಫರಾಜ್ ಖಾನ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಎಲ್ಲಾ ಆಟಗಾರರು ಕೂಡ ರೋಹಿತ್‌ಗೆ ರಿವ್ಯೂ ತೆಗೆದುಕೊಳ್ಳಲು ಸಲಹೆ ನೀಡಿದರು. ನಂತರ ರೋಹಿತ್ ಶರ್ಮಾ ರಿವ್ಯೂ ತೆಗೆದುಕೊಂಡರು. ಮೂರನೇ ಅಂಪೈರ್ ವಿಲ್ ಯಂಗ್ ಔಟ್ ಎಂದು ನಿರ್ಧಾರ ತಿಳಿಸಿತು. ಇದೀಗ ಕ್ಯಾಪ್ಟನ್ ಮನವೊಲಿಸಿದ ಸರ್ಫರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.