IND vs NZ T20 Series: ಟಿ20 ಸರಣಿಯಿಂದ ಹೊರಬಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಈಗ ಮೂರು ಪಂದ್ಯಗಳ ಟಿ20 ಸರಣಿಯತ್ತ ಕಣ್ಣಿಟ್ಟಿದೆ. ಜನವರಿ 27 ರಂದು ಟಿ20 ಸರಣಿಯ ಮೊದಲನೇ ಪಂದ್ಯ ನಡೆಯಲಿದೆ.
ಟಿ20 ಸರಣಿಗೆ ಸಿದ್ಧತೆ ಆರಂಭಿಸುವ ಮುನ್ನವೇ ಟೀಂ ಇಂಡಿಯಾದ ಯುವ ಬ್ಯಾಟರ್, ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಸರಣಿಯಿಂದ ಹೊರಬಿದ್ದಿದ್ದಾರೆ. ಬಲ ಮಣಿಕಟ್ಟು ನೋವಿಗೆ ತುತ್ತಾಗಿರುವ ಅವರನ್ನು ಸರಣಿಯಿಂದ ಹೊರಗಿಡಲಾಗಿದೆ.
ಮಣಿಕಟ್ಟು ಗಾಯಕ್ಕೆ ತುತ್ತಾಗಿರುವ ರುತುರಾಜ್ ಗಾಯಕ್ವಾಡ್‌ರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ (ಎನ್‌ಸಿಎ)ಗೆ ಹಾಜರಾಗುವಂತೆ ಬಿಸಿಸಿಐ ಸೂಚನೆ ನೀಡಿತ್ತು, ಅದರಂತೆ ರುತುರಾಜ್ ಮಂಗಳವಾರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ವರದಿ ಮಾಡಿದ್ದಾರೆ.
ಮಣಿಕಟ್ಟಿನ ಗಾಯದಿಂದಾಗಿ 2022ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಕೂಡ ಅವರು ಹೊರಗುಳಿದಿದ್ದರು. 2023ರ ಜನವರಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರೂ, ರುತುರಾಜ್ ಗಾಯಕ್ವಾಡ್ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆಯಲಿಲ್ಲ. ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಆರಂಭಿಕ ಜೋಡಿಯಾಗಿ ಕಣಕ್ಕಿಳಿದಿದ್ದರು.

ರುತುರಾಜ್ ಬದಲಿಗೆ ಬೇರೆ ಆಟಗಾರನ ಆಯ್ಕೆಯಿಲ್ಲ
ರುತುರಾಜ್ ಗಾಯಕ್ವಾಡ್ ಮಣಿಕಟ್ಟು ಗಾಯದಿಂದ ಸರಣಿಯಿಂದ ಹೊರಬಿದ್ದಿದ್ದರೂ ಕೂಡ ಬಿಸಿಸಿಐ ಅವರ ಬದಲಾಗಿ ಬೇರೆ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಇಲ್ಲ. ಘೋಷಣೆ ಮಾಡಿರುವ ತಂಡದಲ್ಲಿ ಈಗಾಗಲೇ ಮೂವರು ಆರಂಭಿಕ ಆಟಗಾರರು ಇರುವ ಕಾರಣ ಬಿಸಿಸಿಐ ಬದಲೀ ಆಟಗಾರನ ಹೆಸರಿಸಲು ಆಸಕ್ತಿ ತೋರಿಲ್ಲ.
"ರುತುರಾಜ್ ಗಾಯಕ್ವಾಡ್ ಮಣಿಕಟ್ಟಿನ ಗಾಯದಿಂದಾಗಿ ಎನ್‌ಸಿಎಯಲ್ಲಿದ್ದಾರೆ. ಅವರ ಗಾಯ ಗಂಭೀರವಾಗಿದೆಯೇ ಇಲ್ಲವೇ ಎನ್ನುವುದು ಇನ್ನೂ ತಿಳಿದಿಲ್ಲ. ಅವರು ಸ್ಕ್ಯಾನ್‌ಗೆ ಒಳಗಾಗಲಿದ್ದು, ನಂತರ ಗಾಯದ ಪ್ರಮಾಣದ ಬಗ್ಗೆ ತಿಳಿಯಲಿದೆ. ತಂಡದಲ್ಲಿ ಈಗಾಗಲೇ ಹಲವು ಆರಂಭಿಕ ಆಟಗಾರರು ಇದ್ದಾರೆ. ಬದಲೀ ಆಟಗಾರರನ್ನು ಹೆಸರಿಸುವುದು ಆಯ್ಕೆದಾರರಿಗೆ ಬಿಟ್ಟದ್ದು" ಎಂದು ಬಿಸಿಸಿಐ ಹಿರಿಯ ಅಧಿಕಾರಿ ತಿಳಿಸಿದ್ದಾರೆ ಎಂದು ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಪೃಥ್ವಿ ಶಾ, ರಾಹುಲ್ ತ್ರಿಪಾಟಿ ತಂಡಕ್ಕೆ
ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ, ರಾಷ್ಟ್ರೀಯ ಕ್ರಿಕೆಟ್‌ಗೆ ಆಯ್ಕೆಯಾಗದೆ ಪದೇ ಪದೇ ನಿರಾಸೆ ಅನುಭವಿಸುತ್ತಿದ್ದ ಆರಂಭಿಕ ಆಟಗಾರ ಪೃಥ್ವಿ ಶಾ ಕೊನೆಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಪೃಥ್ವಿ ಶಾ ಜೊತೆಗೆ ರಾಹುಲ್ ತ್ರಿಪಾಠಿ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು. ಬುಧವಾರ ರಾಂಚಿಯಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ. ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದ ಸರಣಿಯಿಂದ ಹೊರಗುಳಿದಿದ್ದಾರೆ.

ಸರಣಿಯ ವೇಳಾಪಟ್ಟಿ ಮತ್ತು ಭಾರತ ತಂಡ
ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಒಂದು ದಿನದ ರಜೆ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ರಾಂಚಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜನವರಿ 27 ರಂದು ಟಿ20 ಸರಣಿಯ ಮೊದಲನೇ ಪಂದ್ಯ ರಾಂಚಿಯಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಜನವರಿ 29 ಭಾನುವಾರ ಲಕ್ನೋದಲ್ಲಿ ನಡೆಯಲಿದೆ. ಸರಣಿಯ ಅಂತಿಮ ಪಂದ್ಯಕ್ಕೆ ಅಹಮದಾಬಾದ್ ಆತಿಥ್ಯ ವಹಿಸಲಿದೆ.
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್ , ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಪೃಥ್ವಿ ಶಾ, ಮುಖೇಶ್ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications