ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ಅಂತಿಮ ಹಂತಕ್ಕೆ ಅರ್ಹತೆ ಪಡೆದಿವೆ. ಎರಡೂ ತಂಡಗಳ ಕಾದಾಟ ರೋಚಕತೆ ಹೆಚ್ಚಿಸಿದೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30 ಪಂದ್ಯಗಳನ್ನು ಆಡಿದ್ದು, 18ರಲ್ಲಿ ಭಾರತ ಜಯ ಸಾಧಿಸಿದೆ. ಇನ್ನು 11 ಪಂದ್ಯಗಳನ್ನು ಕಿವೀಸ್ ಗೆದ್ದಿದೆ. ಉಭಯ ತಂಡಗಳು ಟಿ20 ವಿಶ್ವಕಪ್‌ನಲ್ಲಿ 3 ಬಾರಿ ಎದುರಾಗಿದ್ದು, ಈ ಮೂರು ಪಂದ್ಯಗಳಲ್ಲೂ ನ್ಯೂಜಿಲೆಂಡ್ ಜಯ ಸಾಧಿಸಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು, ಎಲ್ಲರ ಚಿತ್ತ ನೆಟ್ಟಿದೆ.

ಎರಡೂ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿವೆ. ಎರಡೂ ತಂಡಗಳಲ್ಲೂ ಖ್ಯಾತ ನಾಮ ಆಟಗಾರರು ಇದ್ದಾರೆ. ಹೊಡಿ ಬಡಿ ಆಟದ ಹೆಸರಾಂತ ಆಟಗಾರರು ಎರಡೂ ತಂಡಗಳಲ್ಲಿ ಇದ್ದಾರೆ. ಅಲ್ಲದೆ ಉಭಯ ತಂಡಗಳ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ತಂಡಗಳ ಜಯದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.
ಟೀಮ್ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಇಡೀ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಇವರ ಮೇಲೆ ಒತ್ತಡವಿದೆ. ಕೊನೆಯ ಅವಕಾಶದಲ್ಲಿ ಅಭಿಷೇಕ್ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಅಲ್ಲದೆ ಈ ಹಿಂದಿನ ಪಂದ್ಯಗಳಲ್ಲಿ ಮಾಡಿರುವ ತಪ್ಪುಗಳನ್ನು ಮೆಟ್ಟಿನಿಂತು ಅಭಿಷೇಕ್ ಇನಿಂಗ್ಸ್ ಕಟ್ಟಬೇಕಿದೆ. ಇವರೊಂದಿಗೆ ಇನಿಂಗ್ಸ್ ಆರಂಭಿಸುವ ಸಂಜು ಸ್ಯಾಮ್ಸನ್ ಭರ್ಜರಿ ಟಚ್‌ನಲ್ಲಿದ್ದಾರೆ. ಇವರು ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿದ್ದು, ತಂಡಕ್ಕೆ ಆಸರೆಯಾಗಿದ್ದಾರೆ. ಹೀಗಾಗಿ ಇವರ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಅನಿವಾರ್ಯತೆ ಇದೆ. ಇನ್ನು ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಬ್ಯಾಟ್ ಮಾಡಿ, ಬಳಿಕ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಸಾಮರ್ಥ್ಯ ಈ ಆಟಗಾರರಿಗೆ ಇದೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಇನ್ನೊಮ್ಮೆ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಈ ಮೂವರು ಆಟಗಾರರು ಡೆತ್ ಓವರ್‌ಗಳಲ್ಲಿ ರನ್‌ಗಳನ್ನು ಹಿಗ್ಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರು ಸ್ಥಿರ ಆಟ ಆಡುವ ಅನಿವಾರ್ಯತೆ ಇದೆ.
ಟೀಮ್ ಇಂಡಿಯಾ ಮಹತ್ವದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಅವರನ್ನು ಕೈ ಬಿಡುತ್ತಾ ಎಂಬ ಸಂಶಯಗಳು ಮೂಡಲು ಆರಂಭಿಸಿವೆ. ಇವರು ಕಳೆದ ಕೆಲವು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇವರ ಸ್ಥಾನದಲ್ಲಿ ಕುಲ್‌ದೀಪ್ ಯಾದವ್ ಅವರಿಗೆ ಅವಕಾಶ ಸಿಗುತ್ತಾ ಎಂಬ ಅನುಮಾನ ಮೂಡುತ್ತಿದೆ. ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ, ಅರ್ಶದೀಪ್ ಸಿಂಗ್ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳಿಗೆ ಕಾಡಬೇಕಿದೆ. ಅಂದಾಗ ಮಾತ್ರ ಭಾರತ ಗೆಲುವಿನ ಕೇಕೆ ಹಾಕಬಹುದು.

ನ್ಯೂಜಿಲೆಂಡ್ ತಂಡದಲ್ಲಿರುವ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆರಂಭಿಕರಾದ ಟಿಮ್ ಸಿಫರ್ಟ್, ಫಿನ್ ಅಲೆನ್ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರಿಸಿದ್ದರು. ಹೀಗಾಗಿ ಇವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಮಧ್ಯಮ ಕ್ರಮಾಂಕದಲ್ಲಿರುವ ಆಟಗಾರರು ಸ್ಥಿರ ಆಟದ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಮ್ಯಾಟ್ ಹೆನ್ರಿ, ಲಾಕಿ ಫಾರ್ಗ್ಯೂಸನ್ ಬಿಗುವಿನ ದಾಳಿ ನಡೆಸುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ ಬೌಲಿಂಗ್ ವಿಭಾಗವನ್ನು ಮಿಚೆಲ್ ಸ್ಯಾಂಟ್ನರ್ ಮುನ್ನಡೆಸುತ್ತಿದ್ದು, ರಚಿನ್ ರವೀಂದ್ರ ಇವರಿಗೆ ಉತ್ತಮ ಸಾಥ್ ನೀಡಲಿದ್ದಾರೆ. ಎರಡೂ ತಂಡಗಳು ಭರ್ಜರಿ ಪ್ರದರ್ಶನ ನೀಡಿದ್ದರಿಂದ ಕದನ ರೋಚಕತೆ ಹೆಚ್ಚಿಸಿದೆ.