ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಭಾರತ ತಂಡದಲ್ಲಿ ಅನುಭವಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಈ ಇಬ್ಬರೂ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈ ಸರಣಿಯಲ್ಲಿ ಮತ್ತೊಮ್ಮೆ ಅಂಗಳ ಪ್ರವೇಶಿಸಲಿದ್ದಾರೆ. ಈ ವೇಳೆ ಉಭಯ ಸ್ಟಾರ್ ಆಟಗಾರರು ದೊಡ್ಡ ದಾಖಲೆಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಬಳಿಕ, ರೋ-ಕೊ ಜೋಡಿ ವಿಜಯ್ ಹಜಾರೆ ಟ್ರೋಫಿಯಲ್ಲೂ ತಮ್ಮ ತಮ್ಮ ತಂಡಗಳ ಪರ ಆಡಿ ಸೈ ಎನಿಸಿಕೊಂಡಿದೆ. ಈಗ ಇವರಿಬ್ಬರು ನ್ಯೂಜಿಲೆಂಡ್ ಸರಣಿಯಲ್ಲಿ ತಮ್ಮ ಕ್ಲಾಸ್ ಆಟವನ್ನು ಪ್ರದರ್ಶಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.

ವಿರಾಟ್, ರೋಹಿತ್ ಇಬ್ಬರೂ ಕ್ರಿಕೆಟ್ ಅಂಗಳಕ್ಕೆ ಇಳಿದರೆ ದಾಖಲೆಗಳು ನಿರ್ಮಾಣ ಆಗುತ್ತವೆ. ಈ ಬಾರಿಯೂ ಸಾಲು ಸಾಲು ದಾಖಲೆಗಳ ಮೇಲೆ ಉಭಯ ಆಟಗಾರರು ಕಣ್ಣು ನೆಟ್ಟಿದ್ದಾರೆ. ವಿರಾಟ್ ಕೊಹ್ಲಿ 25 ರನ್ ಬಾರಿಸಿದ್ದೇ ಆದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28 ಸಾವಿರ ರನ್ ಪೂರೈಸಿದ ದಾಖಲೆಯನ್ನು ಬರೆಯಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೊದಲು ಈ ಸಾಧನೆಯನ್ನು ದಿಗ್ಗಜ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಕುಮಾರ್ ಸಂಗಕ್ಕಾರ ಮಾಡಿದ್ದರು. ಈಗ ಈ ಸಾಲಿಗೆ ವಿರಾಟ್ ಸೇರ್ಪಡೆ ಆಗಲಿದ್ದಾರೆ.
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಒಂದು ಶತಕ ಬಾರಿಸಿದ್ದೇ ಆದಲ್ಲಿ ದೊಡ್ಡ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಬಹುದಾಗಿದೆ. ಈಗಾಗಲೇ ವಿರಾಟ್, ಕಿವೀಸ್ ವಿರುದ್ಧ 6 ಶತಕಗಳನ್ನು ಬಾರಿಸಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಶತಕವನ್ನು ಬಾರಿಸಿದ್ದೇ ಆದಲ್ಲಿ, ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಅಳಿಸಿ ಹಾಕಲಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ನ್ಯೂಜಿಲೆಂಡ್ ವಿರುದ್ಧ 23 ಪಂದ್ಯಗಳನ್ನು ಆಡಿದ್ದು 1157 ರನ್ ಕಲೆ ಹಾಕಿದ್ದಾರೆ. ಅಲ್ಲದೆ 6 ಶತಕಗಳನ್ನು ಸಹ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 33 ಏಕದಿನ ಪಂದ್ಯಗಳಲ್ಲಿ 1657 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ. ವಿರಾಟ್ ಈ ಸರಣಿಯಲ್ಲಿ ಇನ್ನೊಂದು ಶತಕವನ್ನು ಬಾರಿಸುವಲ್ಲಿ ಸಫಲರಾದರೆ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಅಳಿಸಿ ಹಾಕಬಹುದಾಗಿದೆ.
ಸದ್ಯ ವಿರಾಟ್ ಕೊಹ್ಲಿ ಅವರ ಫಾರ್ಮ್ ನೋಡಿದರೆ ಅವರು ಈ ಸಾಧನೆಯನ್ನು ಈ ಸರಣಿಯಲ್ಲಿ ಮಾಡಿ ಮುಗಿಸಬಲ್ಲರು ಎಂದು ಕಾಣುತ್ತಿದೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ 300 ರನ್ ಬಾರಿಸಿದ್ದರು. ಇದರಲ್ಲಿ ರಾಂಚಿ ಹಾಗೂ ರಾಯ್‌ಪುರ್‌ದಲ್ಲಿ ಬಾರಿಸಿದ ಶತಕಗಳು ಸಹ ಸೇರಿವೆ. ಇನ್ನು ವಿಜಯ್ ಹಜಾರೆಯಲ್ಲೂ ಆಡಿದ ಎರಡೂ ಪಂದ್ಯಗಳಲ್ಲಿ ಶತಕದ ಸಾಧನೆಯನ್ನು ಮಾಡಿದ್ದಾರೆ. ಹೀಗಾಗಿ ವಿರಾಟ್ ಈ ಸರಣಿಯಲ್ಲಿ ಈ ದಾಖಲೆಯನ್ನು ಮೀರಿ ನಿಲ್ಲಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.