ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 21ನೇ ರೋಚಕ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡುತ್ತಿದೆ.
ಇದೇ ವೇಳೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಗಾಯದಿಂದಾಗಿ ಭಾರತ ತಂಡವು ತಮ್ಮ ಮೊದಲ ನಾಲ್ಕು ವಿಶ್ವಕಪ್ ಪಂದ್ಯಗಳಲ್ಲಿ ಹೊಂದಿದ್ದ ಸಮತೋಲನವನ್ನು ಹೊಂದಿಲ್ಲದಿರಬಹುದು ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ.

ಆದರೆ, ಈ ಬೆಳವಣಿಗೆ ಆತಿಥೇಯ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧ ವಿಭಿನ್ನ ಸಂಯೋಜನೆಯನ್ನು ಪ್ರಯೋಗಿಸಲು ಅವಕಾಶವನ್ನು ನೀಡಲಿದೆ. ಬೆಂಚ್ ಕಾಯಿಸಿದ್ದ ಆಟಗಾರರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶದ ವಿರುದ್ಧ ಏಳು ವಿಕೆಟ್‌ಗಳ ವಿಜಯದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಪಾದದ ಗಾಯಕ್ಕೆ ಒಳಗಾದ ಕಾರಣ, ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಲಭ್ಯವಿರುವುದಿಲ್ಲ.
"ಹಾರ್ದಿಕ್ ಪಾಂಡ್ಯ ನಮಗೆ ಪ್ರಮುಖ ಆಟಗಾರ. ನಿಸ್ಸಂಶಯವಾಗಿ ಅವರು ಈ ಪಂದ್ಯವನ್ನು ಕಳೆದುಕೊಂಡಿದ್ದಾರೆ ಮತ್ತು ನಾವು ಉಳಿದ 14 ಆಟಗಾರರ ಸುತ್ತ ಕೆಲಸ ಮಾಡಲು ಪ್ರಯತ್ನಿಸುತ್ತೇವೆ ಮತ್ತು ಉತ್ತಮ ಸಂಯೋಜನೆ ಯಾವುದು ಎಂದು ನೋಡಲಿದ್ದೇವೆ," ಎಂದು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.

"ಮೊದಲ ನಾಲ್ಕು ಪಂದ್ಯಗಳಲ್ಲಿ ಭಾರತ ತಂಡ ಹೊಂದಿದ್ದ ಸಮತೋಲನವನ್ನು ಅನಿವಾರ್ಯವಾಗಿ ಕಳೆದುಕೊಳ್ಳುತ್ತೇವ," ಎಂದು ರಾಹುಲ್ ದ್ರಾವಿಡ್ ಅವರು ನ್ಯೂಜಿಲೆಂಡ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳಿಗೆ ತಿಳಿಸಿದರು.
ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧ ಪಂದ್ಯದ ಒಂಬತ್ತನೇ ಓವರ್‌ನಲ್ಲಿ ಆರಂಭಿಕ ಬ್ಯಾಟರ್ ಲಿಟ್ಟನ್ ದಾಸ್‌ಗೆ ಎರಡನೇ ಎಸೆತವನ್ನು ಎಸೆದ ನಂತರ, ತನ್ನ ಫಾಲೋ-ಥ್ರೂನಲ್ಲಿ ಚೆಂಡನ್ನು ತಡೆಯಲು ಬಲಗಾಲನ್ನು ಬಳಸಲು ವಿಫಲ ಪ್ರಯತ್ನ ಮಾಡಿದರು. ಚೆಂಡು ಬೌಂಡರಿಗೆ ಓಡಿತು, ಆದರೆ, ಪಾಂಡ್ಯ ಪಾದಕ್ಕೆ ಗಾಯ ಮಾಡಿಕೊಂಡು ನೆಲಕ್ಕೆ ಬಿದ್ದರು.
ತೀವ್ರವಾಗಿ ಗಾಯಗೊಂಡ ಹಾರ್ದಿಕ್ ಪಾಂಡ್ಯ ತನ್ನ ಬೌಲಿಂಗ್ ರನ್-ಅಪ್ ಕಡೆಗೆ ಹೋಗುತ್ತಿರುವುದನ್ನು ಗಮನಿಸಲಾಯಿತು. ನೋವಿನ ನಡುವೆಯೂ ಬೌಲಿಂಗ್ ಮಾಡಲು ಯತ್ನಿಸಿದ ಹಾರ್ದಿಕ್ ಕಂಡು ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಉತ್ಸಾಹಭರಿತ ಹರ್ಷೋದ್ಗಾರ ಕೇಳಿಬಂತು.
ಹಾರ್ದಿಕ್ ಪಾಂಡ್ಯ ಆರಂಭದಲ್ಲಿ ಬೌಲಿಂಗ್ ಮುಂದುವರಿಸಲು ನಿರ್ಧರಿಸಿದ್ದರೂ, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೊನೆಯ ಕ್ಷಣದಲ್ಲಿ ಚರ್ಚಿಸಿ ನಿರ್ಧಾರ ಬದಲಿಸಿದರು. ಹಾರ್ದಿಕ್ ಪಾಂಡ್ಯ ಮೈದಾನವನ್ನು ತೊರೆಯುವಂತೆ ಸಲಹೆ ನೀಡಿದರು.
ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಪ್ರಮುಖ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಮತ್ತು ಲಕ್ನೋದಲ್ಲಿ ಅಕ್ಟೋಬರ್ 29ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ನೇರವಾಗಿ ತಂಡವನ್ನು ಮತ್ತೆ ಸೇರಿಕೊಳ್ಳುತ್ತಾರೆ ಎಂದು ಭಾರತ ತಂಡವು ನಂತರ ಖಚಿತಪಡಿಸಿದೆ.
"ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಅವರನ್ನು ಸ್ಕ್ಯಾನ್‌ಗಾಗಿ ಬೆಂಗಳೂರಿನ ಎನ್‌ಸಿಎಗೆ ಕಳುಹಿಸಲಾಗಿದೆ ಮತ್ತು ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಅವರು ಬಿಸಿಸಿಐ ವೈದ್ಯಕೀಯ ತಂಡದ ನಿರಂತರ ಮೇಲ್ವಿಚಾರಣೆಯಲ್ಲಿರುತ್ತಾರೆ,"ಎಂದು ತಂಡದ ಮೂಲಗಳು ತಿಳಿಸಿವೆ.