ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕೊನೆಯ ಹಾಗು 3 ಟೆಸ್ಟ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ನ್ಯೂಜಿಲೆಂಡ್ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಭಾರತ ವಿರುದ್ಧ ಮೂರು ಟೆಸ್ಟ್ ಪಂದ್ಯಗಗಳ ಸರಣಿಯಲ್ಲಿ ನ್ಯೂಜಿಲೆಂಡ್ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈಗ ಮುಂಬೈನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವು ಸರಣಿಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಈ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ಗೆ ಬಹಳ ಪ್ರಮುಖವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಮುಂಬೈ ಟೆಸ್ಟ್ ಪಂದ್ಯದ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ನವೆಂಬರ್ 1 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ ಮೈದಾನಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಭಾರತ ವೈಟ್‌ವಾಶ್ ತಪ್ಪಿಸಲು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯೂಟಿಸಿ) ಫೈನಲ್‌ಗೆ ತಲುಪಲು ಗೆಲುವು ಸಾಧಿಸುವು ನಿರೀಕ್ಷೆಯಲ್ಲಿದ್ದಾರೆ. ಈಗ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಹೇಗೆ ಮುಂಬೈ ಟೆಸ್ಟ್ ಪಂದ್ಯದಲ್ಲಿ ಪುಟಿದೇಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಮುಂಬೈ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು.
ಸತತ ಎರಡು ಟೆಸ್ಟ್ ಪಂದ್ಯಗಳ ಸೋಲಿನ ಬಳಿಕವೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗಿಲ್ಲ. ಕೆಎಲ್ ರಾಹುಲ್ ಬದಲಿಗೆ ಸರ್ಫರಾಜ್ ಖಾನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿದೆ. ಈಗ ರಾಹುಲ್ ಗೆ ಹೆಚ್ಚಿನ ಅವಕಾಶಗಳನ್ನು ನೀಡಬಹುದು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ರಾಹುಲ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ.ಇನ್ನು ಮೂರನೇ ಟೆಸ್ಟ್‌ನಲ್ಲಿ ಹೆಡ್‌ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ರಾಹುಲ್‌ಗೆ ಅವಕಾಶ ನೀಡುತ್ತಾರೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ.
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಆಸ್ಟ್ರೇಲಿಯಾದ ಪ್ರವಾಸಕ್ಕೂ ಮೊದಲು, ಕೆಲಸದ ಹೊರೆ ನಿರ್ವಹಣೆಯ ಅಡಿಯಲ್ಲಿ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಬಹುದು. ಬುಮ್ರಾಗೆ ಇದು ಶಾಂತ ಸರಣಿಯಾಗಿದೆ. ಈಗಾಗಲೇ ಭಾರತ ಸರಣಿಯನ್ನು ಕಳೆದುಕೊಂಡಿದ್ದು, ಬುಮ್ರಾ ಅವರು ವಿಶ್ರಾಂತಿ ಪಡೆಯಬಹುದು. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ 1 ತಿಂಗಳ ವಿರಾಮ ಪಡೆಯಲಿದ್ದಾರೆ. ಬುಮ್ರಾ ಬದಲಿಗೆ ಪುಣೆ ಟೆಸ್ಟ್ ಪಂದ್ಯ ಹೊರಗುಳಿದಿದ್ದ
ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗಬಹುದು. ಆಕಾಶ್ ದೀಪ್ ತಂಡದಲ್ಲಿ ಉಳಿಯಲಿದ್ದಾರೆ.
ಇದಲ್ಲದೆ, ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಮೊಣಕಾಲಿನ ಗಾಯದಿಂದ ಬಳಲುತ್ತಿರುವ ರಿಷಬ್ ಪಂತ್ ಕೂಡ ಮೂರನೇ ಪಂದ್ಯದಿಂದ ಹೊರಗುಳಿಯಬಹುದು. ಆಸ್ಟ್ರೇಲಿಯಾ ಸರಣಿಯಲ್ಲಿ ಪಂತ್ ಭಾರತದ ಪ್ರಮುಖ ಆಟಗಾರನಾಗಿದ್ದು, ಅವರಿಗೆ ವಿಶ್ರಾಂತಿ ನೀಡಬಹುದು. ಇಂತಹ ಪರಿಸ್ಥಿತಿಯಲ್ಲಿ ಧ್ರುವ್ ಜುರೆಲ್‌ಗೆ ಮುಂಬೈ ಟೆಸ್ಟ್ ಪಂದ್ಯ ಆಡುವ ಅವಕಾಶ ಸಿಗಬಹುದು.