ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಣೆಸಾಟಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಇನ್ನಿಲ್ಲದಂತೆ ಕಾಯುತ್ತಿದ್ದಾರೆ ಎನ್ನುವುದು ಸ್ಪಷ್ಟ. ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯಲಿದ್ದು ತೀವ್ರ ಪೈಪೋಟಿ ನಡೆಯುವ ನಿರೀಕ್ಷೆಯಿದೆ.
ಇನ್ನು ಇತ್ತೀಚೆಗಷ್ಟೇ ಭಾರತ ಏಷ್ಯಾಕಪ್‌ನಲ್ಲಿ ಎರಡು ಬಾರಿ ಪಾಕಿಸ್ತಾನ ತಂಡವನ್ನು ಎದುರಿಸಿದ್ದು ಎರಡು ಬಾರಿಯೂ ಮಣಿಸಿತ್ತು. ಅಲ್ಲದೆ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಈವರೆಗೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪಾಕಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ತವಕಿಸುತ್ತಿದೆ. ಇನ್ನು ಭಾರತ ತವರಿನಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ನಿರೀಕ್ಷೆಯಂತೆಯೇ ಗೆಲುವು ಸಾಧಿಸ ಬೇಕಿದ್ದರೆ ಪಾಕಿಸ್ತಾನದ ವಿರುದ್ಧದ ಈ ಪಂದ್ಯದ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಲು ಮತ್ತಷ್ಟು ಸಹಕಾರಿಯಾಗಲಿದೆ.

ಇನ್ನು ಎರಡೂ ತಂಡಗಳ ಅಭಿಮಾಣಿಗಳು ಕೂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇ ಬೇಕು ಎನ್ನುವ ನಿಟ್ಟಿನಲ್ಲಿ ನಿರೀಕ್ಷೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ಪಂದ್ಯದಲ್ಲಿ ಎರಡು ತಂಗಳು ಕೂಡ ವಿಶೇಷ ರಣತಂತ್ರವನ್ನು ಸಿದ್ಧಪಡಿಸಿದ್ದು ಭಾರತದ ಪರವಾಗಿ ಮೂರು ಸರ್ಪ್ರೈಜ್ ಅಸ್ತ್ರಗಳು ಪಾಕ್‌ಗೆ ಆಘಾತ ನೀಡಲು ಸಜ್ಜಾಗಿದೆ.
ಪಾಕಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿ ಆಘಾತ ನೀಡಲು ಸಿದ್ಧವಾಗಿರುವ ಮೊದಲ ಅಸ್ತ್ರವೇ ಆರಂಭಿಕ ಆಟಗಾರ ಶುಬ್ಮನ್ ಗಿಲ್. ಡೆಂಗ್ಯೂ ಜ್ವರದ ಕಾರಣದಿಂದಾಗಿ ಗಿಲ್ ಈ ಪಂದ್ಯದಲ್ಲಿ ಆಡುವುದು ಈವರೆಗೂ ಖಚಿತವಾಗಿಲ್ಲ. ಆದರೆ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಯುವ ಆಟಗಾರ ನೆಟ್ಸ್‌ನಲ್ಲಿಯೂ ಕಾಣಿಸಿಕೊಂಡಿದ್ದು ತಾನು ಸಂಪೂರ್ಣ ಸಜ್ಜು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಪಾಕಿಸ್ತಾನದ ವೇಗದ ಔಲಿಂಗ್ ವಿಭಾಗಕ್ಕೆ ಗಿಲ್ ಮೂಲಕ ತೀಕ್ಷ್ಣ ಪ್ರತ್ಯುತ್ತರ ನೀಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಅಲ್ಲದೆ ನಾಯಕ ರೋಹಿತ್ ಶರ್ಮಾ ಸೇರಿದಂತೆ ಉಳಿದೆಲ್ಲಾ ಬ್ಯಾಟರ್‌ಗಳು ಕೂಡ ಅದ್ಭುತವಾದ ಲಯದಲ್ಲಿದ್ದು ಇದು ತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಪಾಕಿಸ್ತಾನ ಕಡೆಗಣಿಸಲು ಸಾಧ್ಯವೇ ಇಲ್ಲ. ಪಾಕಿಸ್ತಾನದಂಥಾ ಎದುರಾಳಿಯ ವಿರುದ್ಧ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಲು ಸಿದ್ಧವಾಗಿದ್ದಾರೆ. ಟೀಮ್ ಇಂಡಿಯಾದ ಅನುಭವಿ ವೇಗಿಗಳಾದ ಬೂಮ್ರಾ, ಸಿರಾಜ್ ಅವರನ್ನು ಎದುರಿಸುವುದು ಹೇಗೆ ಎಂಬ ಲೆಕ್ಕಾಚಾರ ನಡೆಸುತ್ತಿರುವ ಪಾಕಿಸ್ತಾನ ತಂಡಕ್ಕೆ ಈ ಆಟಗಾರನ ಪ್ರದರ್ಶನ ಹೆಚ್ಚಿನ ಆಘಾತ ನಿಡಿದರೆ ಅಚ್ಚರಿಯಿಲ್ಲ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅಮೋಘ ಬೌಲಿಂಗ್ ಪ್ರದರ್ಶನ ಮೂಲಕ ಮಿಂಚಬಲ್ಲ ಆಟಗಾರ ಎಂದರೆ ಅದು ಕುಲ್‌ದೀಪ್ ಯಾದವ್. ಇಲ್ಲಿನ ಪಿಚ್‌ನ ಲಾಭವನ್ನು ಅದ್ಭುತವಾಗಿ ಬಳಸಿಕೊಂಡು ಎದುರಾಳಿ ಪಾಕ್ ಪಡೆಯ ಬ್ಯಾಟಿಂಗ್ ವಿಭಾಗವನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಕುಲ್‌ದೀಪ್ ಯಾದವ್.