ಟಿ20 ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮತ್ತು ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡ ನಂತರ, ಭಾರತ ಕ್ರಿಕೆಟ್ ತಂಡವು ಇದೀಗ ತಮ್ಮ ಬಹು-ಮಾದರಿಯ ಪ್ರವಾಸದ ಮುಕ್ತಾಯದ ಭಾಗದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ನಾಯಕತ್ವ ವಹಿಸಿದ್ದರು. ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ಖಾಯಂ ನಾಯಕ ರೋಹಿತ್ ಶರ್ಮಾ ವಾಪಸ್ಸಾಗಿದ್ದಾರೆ.

ಮೊದಲ ಟೆಸ್ಟ್ ಪಂದ್ಯವು ಬಾಕ್ಸಿಂಗ್ ದಿನದಂದು (ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ) ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಆರಂಭವಾಗಲಿದೆ.
ರೈನ್‌ಬೋ ನಾಡಿನಲ್ಲಿ ಭಾರತ ಕ್ರಿಕೆಟ್ ತಂಡ ಇದುವರೆಗೆ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಈ ಬಾರಿ ಇತಿಹಾಸ ಬರೆಯಲು ಉತ್ಸುಕವಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವೈಟ್ ಬಾಲ್ ಸರಣಿಗಳಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಮೂವರೂ ರೆಡ್ ಬಾಲ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೌಟುಂಬಿಕ ತುರ್ತುಪರಿಸ್ಥಿತಿಯ ಕಾರಣದಿಂದಾಗಿ ವಿರಾಟ್ ಕೊಹ್ಲಿ ಎರಡು ದಿನಗಳ ಕಾಲ ತವರಿಗೆ ಮರಳಿದ್ದರು. ಆದರೆ ಭಾನುವಾರ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ. ಇನ್ನು ಕೆಎಲ್ ರಾಹುಲ್ ಟೆಸ್ಟ್ ಪಂದ್ಯಗಳಲ್ಲೂ ಭಾರತ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ.
ಟೆಸ್ಟ್ ತಂಡವನ್ನು ಮೊದಲು ಪ್ರಕಟಿಸಿದ ನಂತರ, ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಫಿಟ್‌ನೆಸ್‌ಗೆ ಒಳಪಟ್ಟಿರುವ ಪ್ರಮುಖ ವೇಗಿ ಮೊಹಮ್ಮದ್ ಶಮಿ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ.
ಇನ್ನು ವೈಯಕ್ತಿಕ ಕಾರಣಗಳನ್ನು ನೀಡಿ ಇಶಾನ್ ಕಿಶನ್ ಕೂಡ ಹಿಂದೆ ಸರಿದಿದ್ದು, ಅವರ ಸ್ಥಾನಕ್ಕೆ ಕೆಎಸ್ ಭರತ್ ಆಯ್ಕೆಯಾಗಿದ್ದಾರೆ. ಅಲ್ಲದೆ, ಗಾಯದಿಂದ ಹೊರಗುಳಿದಿರುವ ರುತುರಾಜ್ ಗಾಯಕ್ವಾಡ್‌ಗೆ ಅಭಿಮನ್ಯು ಈಶ್ವರನ್ ಬದಲಿ ಆಟಗಾರನಾಗಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಸ್ಥಳೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ. ಅಂದರೆ, ಭಾರತೀಯ ಕಾಲಮಾನ ಮಧ್ಯಾಹ್ನ 1:30 ಗಂಟೆಗೆ ಕಿಕ್‌ಸ್ಟಾರ್ಟ್ ಆಗಲಿದೆ.
ಸೆಷನ್ ಸಮಯ: 1ನೇ ಅವಧಿ - ಭಾರತೀಯ ಕಾಲಮಾನ ಮಧ್ಯಾಹ್ನ 1.30ರಿಂದ 3.30 ರವರೆಗೆ. 2ನೇ ಸೆಷನ್ - ಸಂಜೆ 4.10ರಿಂದ 6.10ರವರೆಗೆ. 3ನೇ ಸೆಷನ್ - ಸಂಜೆ 6.30ರಿಂದ 8.30 ರವರೆಗೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಪಡೆದುಕೊಂಡಿದೆ.
ಡಿಸ್ನಿ ಸ್ಟಾರ್ ಟಿವಿ ಪ್ರಕಾರ, ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ಬಾಕ್ಸಿಂಗ್ ಡೇ ಟೆಸ್ಟ್‌ನ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್).
ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಕೀಗನ್ ಪೀಟರ್‌ಸನ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್).