
ಸಿಕ್ಸರ್ ಸಿಡಿಸಿ ಇಶಾನ್ ಕಿಶನ್ ಅಪರೂಪದ ದಾಖಲೆ
ಟೀಮ್ ಇಂಡಿಯಾ ಪರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಯುವ ಆಟಗಾರ ಇಶಾನ್ ಕಿಶನ್ 84 ಎಸೆತಗಳಲ್ಲಿ 93 ರನ್ ಸಿಡಿಸಿ ಮಿಂಚಿದರು. ಇಶಾನ್ ಕಿಶನ್ ಅವರ ಈ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಹಾಗೂ 4 ಬೌಂಡರಿಗಳು ಒಳಗೊಂಡಿದೆ. ಈ ಇನ್ನಿಂಗ್ಸ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ 7 ಸಿಕ್ಸರ್‌ಗಳನ್ನು ಸಿಡಿಸಿದ ಭಾರತದ 2ನೇ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 24 ವರ್ಷ 83 ದಿನಗಳಲ್ಲಿ ಇಶಾನ್ ಈ ಸಾಧನೆ ಮಾಡಿದ್ದು ಮೊದಲ ಸ್ಥಾನದಲ್ಲಿ ರಿಷಭ್ ಪಂತ್ ಇದ್ದಾರೆ.

ಚೇಸಿಂಗ್ ವೇಳೆ 300 ಪಂದ್ಯ ಗೆದ್ದು ಭಾರತದ ದಾಖಲೆ
ಇನ್ನು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಎರಡನೇ ಪಂದ್ಯದಲ್ಲಿ ರನ್ ಬೆನ್ನತ್ತಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ರನ್ ಬೆನ್ನಟ್ಟಿ 300 ಗೆಲುವು ಸಾಧಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಟೀಮ್ ಇಂಡಿಯಾ. ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿಯಂತಾ ಆಟಗಾರರ ಭಾರತ ತಂಡ ಈ ದಾಖಲೆ ಬರೆಯಲು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.

2022ರಲ್ಲಿ ಅತಿ ಹೆಚ್ಚಿನ ಮ್ಯಾನ್ ಆಫ್ ದಿ ಮ್ಯಾಚ್ ಶ್ರೇಯಸ್ ಐಯ್ಯರ್
ಇನ್ನು ಈ ವರ್ಷ ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಐಯ್ಯರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ತಮಗೆ ದೊರೆತ ಎಲ್ಲಾ ಅವಕಾಶಗಳನ್ನು ಶ್ರೇಯಸ್ ಐಯ್ಯರ್ ಅದ್ಭುತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ಮಾದರಿಯಲ್ಲಿಯೂ ಭಾರತದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಅಗ್ರ ನಾಲ್ಕರಲ್ಲಿದ್ದಾರೆ ಶ್ರೇಯಸ್ ಐಯ್ಯರ್. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 113 ರನ್‌ಗಳನ್ನು ಬಾರಿಸಿರುವ ಶ್ರೇಯಸ್ ಐಯ್ಯರ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ ಶ್ರೇಯಸ್ ಐಯ್ಯರ್. ಇದು ಈ ವರ್ಷ ಶ್ರೇಯಸ್ ಐಯ್ಯರ್ ಪಡೆದ ಐದನೇ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿದೆ. ಇದು ಭಾರತದ ಇತರ ಎಲ್ಲಾ ಆಟಗಾರರಿಗಿಂತ ಹೆಚ್ಚು. ಎರಡು ಪಂದ್ಯಶ್ರೇಷ್ಠ ಪ್ರಶಸ್ತಿಗಳು ಏಕದಿನ ಮಾದರಿಯಲ್ಲಿ ಪಡೆದುಕೊಂಡಿದ್ದರೆ ಎರಡು ಟಿ20 ಮಾದರಿಯಲ್ಲಿ ಹಾಗೂ ಒಂದು ಟೆಸ್ಟ್ ಮಾದರಿಯಲ್ಲಿ ತಮ್ಮ ಪದಾರ್ಪಣಾ ಪಂದ್ಯದಲ್ಲಿ ಪಡೆದು ಮಿಂಚಿದ್ದಾರೆ.

ಮಂಗಳವಾರ ನಡೆಯಲಿದೆ ನಿರ್ಣಾಯಕ ಪಂದ್ಯ
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ತಲಾ ಒಂದೊಂದು ಸೋಲು ಗೆಲುವಿನ ರುಚಿ ಕಂಡಿದೆ. ಇನ್ನು ಈ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ಮಂಗಳವಾರ ನಡೆಯಲಿದ್ದು ದೆಹಲಿಯ ಅರುಣ್ ಜೇಟ್ಲೀ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ಸರಣಿಯನ್ನು ಈಗಾಗಲೇ ಭಾರತ ತಂಡ 2-1 ಅಂತರದಿಂದ ವಶಕ್ಕೆ ಪಡೆದುಕೊಂಡಿರುವ ಕಾರಣ ಏಕದಿನ ಮಾದರಿಯಲ್ಲಾದರೂ ಗೆದ್ದು ಬೀಗುವ ಕನಸು ಕಾಣುತ್ತಿದೆ ದಕ್ಷಿಣ ಆಫ್ರಿಕಾ. ಈ ಪಂದ್ಯದಲ್ಲಿ ಪ್ರಮುಖ ಆಟಗಾರು ಇಲ್ಲದಿದ್ದರೂ ಭಾರತದ ಎರಡನೇ ದರ್ಜೆಯ ಆಟಗಾರರ ಬಳಗ ಅದ್ಭುತ ಹೋರಾಟವನ್ನು ನೀಡುತ್ತಿರುವುದು ಗಮನಾರ್ಹ ಸಂಗತಿ.


Click it and Unblock the Notifications












